ನವದೆಹಲಿ: ಹೊರಗಿನಿಂದ ತಂದ ಆಹಾರ ಪದಾರ್ಥಗಳನ್ನು ಸಿನಿಮಾ ಮಂದಿರಗಳ ಆವರಣದಲ್ಲಿ ಸೇವಿಸಲು ಅನುಮತಿ ನೀಡುವ ಕುರಿತು ಚಿತ್ರಮಂದಿರಗಳ ಮಾಲೀಕರು ನಿರ್ಧಾರ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಆವರಣದಲ್ಲಿ ಆಹಾರ ಮತ್ತು ಪಾನೀಯಗಳ ಮಾರಾಟಕ್ಕೆ ಸಂಬಂಧಿಸಿ ನಿರ್ಬಂಧಗಳನ್ನು ವಿಧಿಸುವ ಅಧಿಕಾರವನ್ನು ಚಿತ್ರಮಂದಿರಗಳ ಮಾಲೀಕರು ಹೊಂದಿರುತ್ತಾರೆ ಎಂದೂ ಹೇಳಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
ಚಿತ್ರಮಂದಿರಗಳೊಳಗೆ ಹೊರಗಿನಿಂದ ಪದಾರ್ಥಗಳನ್ನು ತರುವುದಕ್ಕೆ ನಿರ್ಬಂಧ ವಿಧಿಸದಂತೆ ಸೂಚಿಸಿ ಜಮ್ಮು-ಕಾಶ್ಮೀರ ಹೈಕೋರ್ಟ್ 2018ರ ಜುಲೈನಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು.
'ಚಿತ್ರಮಂದಿರವು ಖಾಸಗಿ ಸ್ವತ್ತು. ಸಾರ್ವಜನಿಕ ಹಿತಾಸಕ್ತಿ, ಸುರಕ್ಷತೆ ಹಾಗೂ ಕಲ್ಯಾಣದಂತಹ ಅಂಶಗಳಿಗೆ ವಿರುದ್ಧವಾಗಿರದ ರೀತಿಯಲ್ಲಿ ನಿಯಮ-ನಿರ್ಬಂಧಗಳನ್ನು ರೂಪಿಸುವ ಅಧಿಕಾರ ಚಿತ್ರಮಂದಿರದ ಮಾಲೀಕ ಹೊಂದಿರುತ್ತಾನೆ' ಎಂದು ನ್ಯಾಯಪೀಠ ಹೇಳಿದೆ.
'ಒಂದು ಚಲನಚಿತ್ರವನ್ನು ನೋಡಬೇಕೇ, ಬೇಡವೇ ಎಂಬುದು ಪ್ರೇಕ್ಷಕನ ಆಯ್ಕೆಯಾಗಿರುತ್ತದೆ. ಆದರೆ, ಯಾವಾಗ ಪ್ರೇಕ್ಷಕ ಚಿತ್ರಮಂದಿರ ಪ್ರವೇಶಿಸುತ್ತಾನೋ, ಆಗ ಆತ/ಆಕೆ ಅಲ್ಲಿನ ನಿಬಂಧನೆಗಳಂತೆ ನಡೆದುಕೊಳ್ಳಬೇಕು' ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿತು.