ಡೆಹ್ರಾಡೂನ್: ಅಮೆರಿಕದಲ್ಲಿ ಕೋವಿಡ್ ಉಲ್ಬಣಕ್ಕೆ ಕಾರಣವಾದ COVID-19 ಹೊಸ ತಳಿ ಎಕ್ಸ್‌ಬಿಬಿ 1.5 ವೈರಸ್ ಉತ್ತರಾಖಂಡದಲ್ಲೂ ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ XBB 1.5 ಪ್ರಕರಣಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಉತ್ತರಾಖಂಡದಲ್ಲಿ ಈ ಹೊಸ ಪ್ರಕರಣ ಪತ್ತೆಯಾಗಿದ್ದು, ಇದಕ್ಕೂ ಮುನ್ನ ಗುಜರಾತ್‌ನಲ್ಲಿ ಮೂರು, ಕರ್ನಾಟಕ, ತೆಲಂಗಾಣ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಒಕ್ಕೂಟ(INSACOG) ತಿಳಿಸಿದೆ.
ಎಕ್ಸ್‌ಬಿಬಿ 1.5 ತಳಿಯು ಓಮಿಕ್ರಾನ್ ನ ಎಕ್ಸ್‌ಬಿಬಿ ರೂಪಾಂತರದ ಸಂಬಂಧಿಯಾಗಿದ್ದು, ಒಮಿಕ್ರಾನ್ ನ ಸಬ್‌ವೇರಿಯೆಂಟ್ ಎಕ್ಸ್‌ಬಿಬಿ 1.5 ಪ್ರಕರಣವು ಡಿಸೆಂಬರ್ 31 ರಂದು ಗುಜರಾತ್‌ನಲ್ಲಿ ಮೊದಲ ಬಾರಿಗೆ ವರದಿಯಾಗಿತ್ತು.
ಈಗಾಗಲೇ ಅಮೆರಿಕದಲ್ಲಿ ಶೇ. 40.5 ರಷ್ಟು ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಎಕ್ಸ್‌ಬಿಬಿ 1.5 ರೂಪಾಂತರಿ ಭಾರತದಲ್ಲೂ ಪತ್ತೆಯಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಮಧ್ಯೆ XBB.1.5 ರೂಪಾಂತರಿಯು ಮೇಲ್ನೋಟಕ್ಕೆ ಅಷ್ಟೊಂದು ಅಪಾಯಕಾರಿಯಲ್ಲ ಎಂಬುದಾಗಿ ತಜ್ಞರು ಹೇಳಿದ್ದಾರೆ. ಎಕ್ಸ್‌ಬಿಬಿ 1.5 ಹೊಸ ಕೋವಿಡ್ ರೂಪಾಂತರದ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಏಕೆಂದರೆ, ಭಾರತದಲ್ಲಿ ಶೇ. 90ರಷ್ಟು ಜನರು ಲಸಿಕೆ ಪಡೆದಿದ್ದಾರೆ.