ಪಾಲಕ್ಕಾಡ್ :ಹರಾಜಿನಲ್ಲಿ ಯಾವ ವಸ್ತು, ಎಷ್ಟು ರೂಪಾಯಿಗೆ ಹರಾಜಾಗಿ ಹೋಗುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಅತ್ಯಂತ ಕನಿಷ್ಟ ಬೆಲೆಯ ವಸ್ತು ಗರಿಷ್ಟ ಮೊತ್ತಕ್ಕೆ ಹರಾಜಾಗುತ್ತದೆ! ಇದಕ್ಕೆ ಸಾಕಷ್ಟು ಉದಾಹರಣೆಗಳೂ ಲಭ್ಯವಿವೆ. ಇದೀಗ ಇಲ್ಲೊಂದು ಕಡೆ 1000 ರೂ. ಮೂಲ ಬೆಲೆ ನಿರ್ಧರಿಸಿ ಕೋಳಿಯೊಂದನ್ನುಹರಾಜಿಗಿಡಲಾಗಿತ್ತು. ಆದರೆ ನೋಡ ನೋಡುತ್ತಿದ್ದಂತೆ ಕೋಳಿ ಯಾರೂ ಊಹಿಸಿರದ ಮೊತ್ತಕ್ಕೆ ಹರಾಜಾಗಿದೆ.
ಕೇರಳದ ಪಾಲಕ್ಕಾಡ್ ದೇವಸ್ಥಾನವೊಂದರಲ್ಲಿ ಪೂರಂ ಹಬ್ಬದ ಅಂಗವಾಗಿ ಹಣ ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ತಾಚಂಪಾರಂ ಕುನ್ನತುಕಾವು ದೇವಸ್ಥಾನ ಸಮಿತಿಯು ಕಳೆದ ಕೆಲ ದಿನಗಳಿಂದ ಒಂದೊಂದೇ ವಸ್ತುಗಳನ್ನು ಹರಾಜು ಹಾಕುತ್ತಿದೆ. ಜನರು ಕೂಡ ಆಸಕ್ತಿಯಿಂದಲೇ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೀಗ ಕೋಳಿಯೊಂದನ್ನು ದೇವಸ್ಥಾನ ಸಮಿತಿಯ ಮೂಲಕವೂ ಹರಾಜು ಮಾಡಲಾಗಿದೆ.
ದೇವಸ್ಥಾನ ಜಾಗೃತ ಸಮಿತಿ ವತಿಯಿಂದ ಕಳೆದ ಬುಧವಾರ ರಾತ್ರಿ ದೇವಸ್ಥಾನದ ಮೈದಾನದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗಿದೆ. 1000 ರೂ.ನಿಂದ ಪ್ರಾರಂಭವಾದ ಹರಾಜು, ನೋಡನೋಡುತ್ತಿದ್ದಂತೆ 10,000 ರೂ.ಗೆ ಏರಿಕೆಯಾಗಿದೆ. ಸೇರಿದ್ದ ಜನರ ಕುತೂಹಲವೂ ಹೆಚ್ಚಾಗಿದೆ.
ಕೂಲ್ ಬಾಯ್ಸ್ ಮತ್ತು ಪಂಚಮಿ ಎಂಬ ಎರಡು ತಂಡಗಳು ಹರಾಜಿನಲ್ಲಿ ಸ್ಪರ್ಧಿಸಿದ್ದು, ಹರಾಜಿಗಿಡಲಾಗಿದ್ದ ಹುಂಜಕ್ಕಾಗಿ ಪೈಪೋಟಿ ನಡೆಸಿವೆ. ಮಧ್ಯರಾತ್ರಿ ಕೊನೆಗೊಂಡ ಹರಾಜಿನಲ್ಲಿ ಕೊನೆಗೆ ಕೂಲ್ ಬಾಯ್ಸ್ ತಂಡ 50,000 ರೂ. ಬಿಡ್ ಮಾಡುವ ಮೂಲಕ ಹುಂಜವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ಈ ಹುಂಜಕ್ಕೆ 'ಅಗ್ನಿದೇವನ್' ಎಂದು ಹೆಸರಿಸಲಾಗಿದೆ.