ನವದೆಹಲಿ: 2023-24ರ ಅವಧಿಯಲ್ಲಿ ಭಾರತ 101 ಕೋಟಿ ಟನ್ ಕಲ್ಲಿದ್ದಲು ಉತ್ಪಾದಿಸುವ ಗುರಿ ಹೊಂದಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಸೋಮವಾರ ಸಂಸತ್‌ಗೆ ತಿಳಿಸಿದ್ದಾರೆ.
ಸ್ಥಳೀಯ ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮುಕ್ತ ಜಾಗತಿಕ ಟೆಂಡರ್‌ಗಳ ಮೂಲಕ ಕಲ್ಲಿದ್ದಲು ಗಣಿಗಳಲ್ಲಿ ಗಣಿಗಾರಿಕೆ ಅಭಿವೃದ್ಧಿಕಾರರು, ನಿರ್ವಹಣಾಕಾರರನ್ನು (ಎಂಡಿಒಎಸ್) ಸರ್ಕಾರ ನೇಮಿಸಿಕೊಳ್ಳುತ್ತಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ (ಸಿಇಎ) ವರದಿ ಪ್ರಕಾರ, ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ 2023ರ ಜನವರಿ 29ರ ವರೆಗೆ 3.2 ಕೋಟಿ ಟನ್ ಕಲ್ಲಿದ್ದಲು ಸಂಗ್ರಹವಾಗಿದೆ.
ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ನಿರಂತರ ಪ್ರಕ್ರಿಯೆಯಾಗಿದೆ. ಪೂರೈಕೆಯ ಸಮಸ್ಯೆಗಳನ್ನು ಪರಿಹರಿಸಲು ವಿದ್ಯುತ್ ಸಚಿವಾಲಯ, ಕಲ್ಲಿದ್ದಲು ಸಚಿವಾಲಯ, ರೈಲ್ವೇ ಸಚಿವಾಲಯ, ಸಿಇಎ, ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಮತ್ತು ಸಿಂಗರೇಣಿ ಕಾಲೀಯರೀಸ್ ಕಂಪನಿಯ ಲಿಮಿಟೆಡ್‌ನ (ಎಸ್‌ಸಿಸಿಎಲ್) ಪ್ರತಿನಿಧಿಗಳನ್ನು ಒಳಗೊಂಡಿರುವ ಅಂತರ-ಸಚಿವಾಲಯದ ಉಪ ಗುಂಪು, ಥರ್ಮಲ್ ಪವರ್ ಪ್ಲಾಂಟ್‌ಗಳಿಗೆ ಕಲ್ಲಿದ್ದಲಿನ ಸರಬರಾಜನ್ನು ಹೆಚ್ಚಿಸಲು ವಿವಿಧ ಕಾರ್ಯಾಚರಣೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ವಿದ್ಯುತ್ ಸ್ಥಾವರಗಳಲ್ಲಿನ ನಿರ್ಣಾಯಕ ಕಲ್ಲಿದ್ದಲು ದಾಸ್ತಾನು ಸ್ಥಿತಿಯನ್ನು ನಿವಾರಿಸುವುದು ಸೇರಿದಂತೆ ವಿದ್ಯುತ್ ವಲಯಕ್ಕೆ ಸಂಬಂಧಿಸಿದ ಯಾವುದೇ ಯೋಜನೆಗಳ ಕುರಿತು ನಿರ್ಧಾರಕ್ಕೆ ಬರಲು ನಿಯಮಿತವಾಗಿ ಸಭೆ ಸೇರುತ್ತದೆ ಎಂದು ಹೇಳಿದರು.