ರಷ್ಯಾವು ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರತಕ್ಕೆ 1.07 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಸೇನಾ ಪರಿಕರಗಳನ್ನು ಪೂರೈಸಿದೆ ಎಂದು ರಷ್ಯಾ ಸರ್ಕಾರಿ ಸ್ವಾಮ್ಯದ ಸ್ಥಳೀಯ ಮಾಧ್ಯಮ ವರದಿ ಮಾಡಿವೆ. ಇಷ್ಟು ಮಾತ್ರವಲ್ಲದೇ ಭಾರತ ಸರ್ಕಾರವು ಹೆಚ್ಚುವರಿ 83 ಸಾವಿರ ಕೋಟಿಗೂ ಅಧಿಕ ಮೌಲ್ಯದ ವಿವಿಧ ಶಸ್ತ್ರಾಸ್ತ್ರಗಳು ಮತ್ತು ಸೇನಾ ಪರಿಕರಗಳಿಗಾಗಿ ಖರೀದಿ ಆದೇಶವನ್ನು ನೀಡಿದೆ. ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ರಾಷ್ಟ್ರ ಭಾರತ. ರಷ್ಯಾದ ಈಗಿನ ಒಟ್ಟು ಖರೀದಿ ಆದೇಶದಲ್ಲಿ ಶೇ 20ರಷ್ಟು ಭಾರತದ್ದೇ ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಭಾರತ, ಚೀನಾ ಮತ್ತು ಏಷ್ಯಾದ ಕೆಲವು ರಾಷ್ಟ್ರಗಳು ಆಸಕ್ತಿ ತೋರಿವೆ. ರಷ್ಯಾ ಜೊತೆಗಿನ ಬಾಂಧವ್ಯ ಕುರಿತು ಅಮೆರಿಕ ನೇತೃತ್ವದಲ್ಲಿ ಪಾಶ್ಚಿಮಾತ್ಯ ದೇಶಗಳಿಂದ ಒತ್ತಡ ಇದ್ದರೂ ಭಾರತವು ಸೇನಾ ತಾಂತ್ರಿಕ ಸಹಕಾರ ಕುರಿತಂತೆ ರಷ್ಯಾದ ಮುಖ್ಯ ಪಾಲುದಾರ ರಾಷ್ಟ್ರವಾಗಿದೆ. ಏಷ್ಯಾದ ರಾಷ್ಟ್ರಗಳು ಮುಖ್ಯವಾಗಿ ರಷ್ಯಾದಿಂದ ಎಸ್–400 ಟ್ರಿಂಫ್ ಕ್ಷಿಪಣಿ ಉಡಾವಣಾ ಸೌಲಭ್ಯ, ಅಲ್ಪಅಂತರದ ವಾಯುನೆಲೆ ಗುರಿಯಾಗಿಸಿ ಭೂಮಿಯಿಂದ ಪ್ರಯೋಗಿಸುವ ಕ್ಷಿಪಣಿಗಳಾದ ಒಸಾ, ಪೆಚೊರಾ, ಸ್ಟೆರ್ಲಾ, ಎಸ್ಯು–30, ಮಿಗ್–29 ಯುದ್ಧ ವಿಮಾನಗಳು, ಹೆಲಿಕಾಪ್ಟರ್, ಡ್ರೋನ್ಗಳ ಖರೀದಿಗೆ ಒಲವು ತೋರುತ್ತಿವೆ ಎಂದು ರಷ್ಯಾದ ಸೇನಾ ತಾಂತ್ರಿಕ ಸಹಕಾರ ಸೇವೆಯ ಮುಖ್ಯಸ್ಥ ಡಿಮಿಟ್ರಿ ಪೆಸ್ಕೊವ್ ಹೇಳಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧದ ವಿಚಾರದಲ್ಲಿ ಭಾರತ ಮೌನ ಅಂತೆಯೇ ಶಸ್ತ್ರಾಸ್ತ್ರ ಖರೀದಿ ಒಪ್ಪಂದಗಳಿಂದಾಗಿಯೇ ಭಾರತ ಉಕ್ರೇನ್-ರಷ್ಯಾ ಯುದ್ಧದ ವಿಚಾರದಲ್ಲಿ ಮೌನವಾಗಿದ್ದು, ಈ ವಿಚಾರವನ್ನು ಭಾರತ ತೀವ್ರವಾಗಿ ಖಂಡಿಸುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಉಕ್ರೇನ್-ರಷ್ಯಾ ಬಿಕ್ಕಟ್ಟು ಪರಿಹಾರಕ್ಕೆ ಸಂಧಾನದ ಮಾರ್ಗವನ್ನು ಅನುಸರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿದ್ದಾರೆ. ಉಕ್ರೇನ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಸದ್ಯ ವಿವಿಧ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ಹೇರಿವೆ. ರಷ್ಯಾ ಪ್ರಸ್ತುತ ಭಾರತಕ್ಕೆ ಎಸ್–400 ಟ್ರಯಂಫ್ ಕ್ಷಿಪಣಿಗಳ ಪೂರೈಕೆಗೆ ಬದ್ಧವಾಗಿದ್ದು, ಸಕಾಲದಲ್ಲಿ ಪೂರೈಕೆ ಮಾಡಲಿದೆ ಎಂದು ಸೇನೆಯ ಮತ್ತೊಬ್ಬ ಅಧಿಕಾರಿಯನ್ನು ಉಲ್ಲೇಖಿಸಿ ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆಯು ವರದಿ ಮಾಡಿದೆ.