ವೆಸ್ಟ್ ಬ್ಯಾಂಕ್: ಇಸ್ರೇಲ್-ಜೋರ್ಡಾನ್ ಗಡಿಯಲ್ಲಿರುವ ವೆಸ್ಟ್ ಬ್ಯಾಂಕ್ ನಗರದ ಜೆನಿನ್ ಮೇಲೆ ಗುರುವಾರ ಇಸ್ರೇಲ್ ಸೇನೆಯು ದಾಳಿ ನಡೆಸಿ 10 ಪ್ಯಾಲೆಸ್ತೀನಿಯರನ್ನು ಹತ್ಯೆ ಮಾಡಿದೆ.
ಇಸ್ರೇಲ್ ಸೇನೆ ದಾಳಿ ಮಾಡಿದ್ದು ಅದರಲ್ಲಿ ಓರ್ವ ಮಹಿಳೆ ಸೇರಿದಂತೆ 10 ಮಂದಿ ಹತ್ಯೆಯಾಗಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯವು ಹೇಳಿದೆ.
ವರದಿಯ ಪ್ರಕಾರ, ಪ್ಯಾಲೆಸ್ತೀನ್ ಭಯೋತ್ಪಾದಕರು ಮತ್ತು ಇಸ್ರೇಲ್ ಸೇನೆಯ ನಡುವೆ ಗುರುವಾರ ಬೆಳಿಗ್ಗೆ ಮೂರು ಗಂಟೆಗಳ ಕಾಲ ಭೀಕರ ಕಾಳಗ ನಡೆದಿತ್ತು. ಏತನ್ಮಧ್ಯೆ, ಕಿಕ್ಕಿರಿದ ನಗರ ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ಭಾರೀ ಗುಂಡಿನ ದಾಳಿ ಮತ್ತು ಸ್ಫೋಟಗಳು ಸಂಭವಿಸಿವೆ.
ಅಡಗುತಾಣದಲ್ಲಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿದ್ದು ಶಂಕಿತ ಮೂವರು ವಾಂಟೆಡ್ ಉಗ್ರರನ್ನು ಬಂಧಿಸಲು ವೆಸ್ಟ್ ಬ್ಯಾಂಕ್ ಗೆ ನುಗ್ಗಲಾಗಿತ್ತು ಎಂದು ಇಸ್ರೇಲಿ ಸೇನೆ ಹೇಳಿದೆ.
ಸೇನೆಯು ಶಂಕಿತರ ಉಗ್ರರು ಅಡಗಿದ್ದ ಕಟ್ಟಡವನ್ನು ಸುತ್ತುವರೆದಿದ್ದು ಅವರನ್ನು ಶರಣಾಗುವಂತೆ ಕೇಳಲಾಯಿತು. ಆದರೆ ಅವರು ಗುಂಡಿನ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಸೇನೆ ಗುಂಡಿನ ದಾಳಿ ನಡೆಸಿದ್ದು ಮೂವರೂ ಸಾವನ್ನಪ್ಪಿದ್ದಾರೆ ಎಂದು ಸೇನೆ ಹೇಳಿದೆ.