ನವದೆಹಲಿ: ರಾಂಚಿಯ ಇಟ್ಕಿ ಬ್ಲಾಕ್ ಪ್ರದೇಶದಲ್ಲಿ ಕಳೆದ 12 ದಿನಗಳಲ್ಲಿ ಆನೆಯೊಂದು 16 ಜನರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದು, ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ 144ನೇ ಸೆಕ್ಷನ್ ಜಾರಿಗೊಳಿಸಿದೆ.
ಗ್ರಾಮಸ್ಥರು ಮನೆಯೊಳಗೆ ಇರಲು ಸೂಚಿಸಲಾಗಿದೆ ಎಂದು ರಾಂಚಿ ವಲಯ ಅರಣ್ಯಾಧಿಕಾರಿ ಶ್ರೀಕಾಂತ್ ವರ್ವ ತಿಳಿಸಿದ್ದಾರೆ. ಆನೆ ಕಂಡುಬಂದಲ್ಲಿ ಅದರ ಹತ್ತಿರ ಹೋಗದಂತೆ ಸೂಚನೆ ನೀಡಲಾಗಿದೆ. ಗ್ರಾಮಸ್ಥರು ಆನೆಯ ಬಳಿ ಜಮಾಯಿಸುತ್ತಿದ್ದು, ಇದರಿಂದ ಆನೆ ಹೆದರಿ ದಾಳಿ ನಡೆಸುತ್ತದೆ.
ಲೋಹರ್ದಗಾ ಜಿಲ್ಲೆಯಲ್ಲಿ ಸೋಮವಾರ ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಮತ್ತು ಭಾನುವಾರ ಒಬ್ಬರನ್ನು ಈ ಆನೆ ತುಳಿದು ಕೊಂದಿತ್ತು. ಸೋಮವಾರ ರಾತ್ರಿ ಇಟ್ಕಿ ಬ್ಲಾಕ್ ಪ್ರವೇಶಿಸಿ ಮಂಗಳವಾರ ಬೆಳಗ್ಗೆ ಇಬ್ಬರು ಮಹಿಳೆಯರು ಸೇರಿ ನಾಲ್ಕು ಜನರನ್ನು ಆನೆ ಕೊಂದಿದೆ ಎಂದು ವರ್ವ ಹೇಳಿದ್ದಾರೆ.
ಅರಣ್ಯ ಇಲಾಖೆ ಪಶ್ಚಿಮ ಬಂಗಾಳದ ತಜ್ಞರ ತಂಡವನ್ನು ನಿಯೋಜಿಸಿದೆ. ನಾಲ್ಕು ವಿಭಾಗಗಳ ಅರಣ್ಯಾಧಿಕಾರಿಗಳನ್ನು ಒಳಗೊಂಡ ಸಮಿತಿಯೂ ಕಾರ್ಯತಂತ್ರ ರೂಪಿಸಿದೆ.