ಶಿಯೋಪುರ್, : ವಾಯುಪಡೆಯ ವಿಶೇಷ ವಿಮಾನದಲ್ಲಿ ಶನಿವಾರ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾದ 12 ಚೀತಾಗಳನ್ನು ಮಧ್ಯ ಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನಕ್ಕೆ (ಕೆಎನ್‌ಪಿ) ಬಿಡಲಾಯಿತು. ಸದ್ಯ ಈ ಚೀತಾಗಳನ್ನು ಕ್ವಾರಂಟೈನ್ ಆವರಣದಲ್ಲಿ ಇರಿಸಲಾಗಿದೆ.
ಗ್ವಾಲಿಯರ್‌ನಿಂದ ಕೆಎನ್‌ಪಿಗೆ ಬಂದ ಚೀತಾಗಳನ್ನು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರು ಉದ್ಯಾನದ ಕ್ವಾರಂಟೈನ್ ಆವರಣಕ್ಕೆ ಬಿಡುಗಡೆ ಮಾಡಿದರು.
ದಕ್ಷಿಣ ಆಫ್ರಿಕಾದಿಂದ ಮರದ ಪೆಟ್ಟಿಗೆಗಳಲ್ಲಿ ಇರಿಸಲಾಗಿದ್ದ ಚೀತಾಗಳನ್ನು ಹೊತ್ತ ವಿಮಾನ ಶನಿವಾರ ಬೆಳಿಗ್ಗೆ 10 ಗಂಟೆಗೆ ಗ್ವಾಲಿಯರ್ ವಿಮಾನನಿಲ್ದಾಣಕ್ಕೆ ಬಂದಿಳಿಯಿತು. ಅಲ್ಲಿಂದ ಐಎಎಫ್ ಹೆಲಿಕಾಪ್ಟರ್‌ಗಳ ಮೂಲಕ ಇವುಗಳನ್ನು ಕೆಎನ್‌ಪಿಗೆ ಕರೆತರಲಾಯಿತು.
ಭಾರತಕ್ಕೆ ಕರೆತಂದಿರುವ ಚೀತಾಗಳಲ್ಲಿ ಏಳು ಗಂಡು ಮತ್ತು ಐದು ಹೆಣ್ಣು. ಈ ಹಿಂದೆ ನಮೀಬಿಯಾದಿಂದ ತಂದಿದ್ದ ಎಂಟು ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಸೆಪ್ಟೆಂಬರ್ 17ರಂದು (ತಮ್ಮ ಜನ್ಮದಿನ) ಕೆಎನ್‌ಪಿಗೆ ಬಿಡುಗಡೆ ಮಾಡಿದ್ದರು. ಈ ಮೂಲಕ ಕೆಎನ್‌ಪಿಯಲ್ಲಿ ಇದೀಗ ಚೀತಾಗಳ ಸಂಖ್ಯೆ 20ಕ್ಕೆ ಏರಿದಂತಾಗಿದೆ.
ಚೀತಾಗಳನ್ನು ಭಾರತಕ್ಕೆ ಕಳುಹಿಸುವ ಮೊದಲು ದಕ್ಷಿಣ ಆಫ್ರಿಕಾ ಅವುಗಳನ್ನು ಕ್ವಾರಂಟೈನ್‌ನಲ್ಲಿಟ್ಟಿತ್ತು ಎಂದು ಕುನೊ ಡಿಎಫ್‌ಒ ಪಿ.ಕೆ.ವರ್ಮಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಭಾರತದಲ್ಲಿ ಚೀತಾಗಳನ್ನು ಮರು ಪರಿಚಯಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾಗಳಿಂದ ಚೀತಾಗಳನ್ನು ತರಿಸಿಕೊಳ್ಳಲಾಗಿದೆ.
ಚೀತಾಗಳು 2-8 ವರ್ಷದವು
ಇದೀಗ ಭಾರತಕ್ಕೆ ಬಂದಿರುವ ಚೀತಾಗಳ ವಯಸ್ಸು 2ರಿಂದ 8 ವರ್ಷಗಳು. ಇವುಗಳ ಸರಾಸರಿ ಜೀವಿತಾವಧಿ 8ರಿಂದ 10 ವರ್ಷಗಳು ಎಂದು ಚೀತಾಗಳನ್ನು ಭಾರತದಲ್ಲಿ ಮರು ಪರಿಚಯಿಸುವ ಯೋಜನೆಯ ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ.
ಒಂದು ಗಂಡು ಚೀತಾ 8 ವರ್ಷ 3 ತಿಂಗಳಷ್ಟು ಪ್ರಾಯದ್ದಾಗಿದ್ದು, 2 ವರ್ಷ 4 ತಿಂಗಳ ಅತಿ ಕಿರಿಯ ಚೀತಾವೂ ತಂಡದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.