ನವದೆಹಲಿ: ಫೆ.14ರಂದು ಪ್ರೇಮಿಗಳ ದಿನದ ಬದಲು ಎಲ್ಲೆಡೆ 'ಸಕಾರಾತ್ಮಕ ಶಕ್ತಿ' ತುಂಬಲು ಮತ್ತು 'ಸಾಮೂಹಿಕ ಸಂತಸ' ಉತ್ತೇಜಿಸಲು 'ಗೋವು ಅಪ್ಪಿಕೊ ದಿನ' ಆಚರಿಸುವಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಜನತೆಗೆ ಮನವಿ ಮಾಡಿದೆ.
'ಪ್ರೇಮಿಗಳ ದಿನವನ್ನು ಪ್ರತಿ ವರ್ಷ ಫೆಬ್ರುವರಿ 14 ರಂದು ಆಚರಿಸಲಾಗುತ್ತದೆ. ಗೋಮಾತೆಯನ್ನು ಪ್ರೀತಿಸುವ ಎಲ್ಲರೂ ಫೆ.14 ಅನ್ನು ಗೋವು ಅಪ್ಪಿಕೊ ದಿನವಾಗಿ ಆಚರಿಸಬೇಕು. ಇದರಿಂದ ಗೋಮಾತೆಯ ಮಹತ್ವ ಅರಿತು, ಬದುಕಿನಲ್ಲಿ ಸಕಾರಾತ್ಮಕ ಶಕ್ತಿ ತುಂಬಿಕೊಂಡು, ಜೀವನ ಆನಂದಮಯವಾಗಿಸಿಕೊಳ್ಳಬಹುದು' ಎಂದು ಪಶುಸಂಗೋಪನೆ ಮತ್ತು ಡೇರಿ ಇಲಾಖೆ ಅಧೀನದ ಮಂಡಳಿಯು ನೋಡಿರುವ ತಿಳಿವಳಿಕೆ ಪತ್ರದಲ್ಲಿ ಹೇಳಿದೆ. ಸೂಕ್ತ ಪ್ರಾಧಿಕಾರದ ಅನುಮೋದನೆಯೊಂದಿಗೆ ಈ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಪಶ್ಚಿಮದ ಸಂಸ್ಕೃತಿಗೆ ಮಾರುಹೋದ ಪರಿಣಾಮ, ವೇದ ಕಾಲದ ಇಂತಹ ಸಂಪ್ರದಾಯಗಳು ಬಹುತೇಕ ಅಳಿವಿನ ಅಂಚಿನಲ್ಲಿವೆ. ಪಾಶ್ಚಿಮಾತ್ಯ ನಾಗರಿಕತೆಯ ಬೆರಗು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಬಹುತೇಕ ಮರೆತಂತೆ ಮಾಡಿಬಿಟ್ಟಿದೆ. ಗೋವು ಅಪ್ಪಿಕೊಳ್ಳುವುದು ಭಾವನಾತ್ಮಕ ಸರಿವಂತಿಕೆ ತರುತ್ತದೆ. ವೈಯಕ್ತಿಕ ಮತ್ತು ಸಾಮೂಹಿಕವಾಗಿಯೂ ಸಂತೋಷ ಇಮ್ಮಡಿಗೊಳಿಸುತ್ತದೆ' ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.