ಶಿಲ್ಲಾಂಗ್: ಮೇಘಾಲಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವವರ ಪೈಕಿ ವಿಧಾನಸಭಾ ಸ್ಪೀಕರ್ ಮೆತ್ಬಾ ಲಿಂಗ್ಡೋಹ್ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದು, ಅವರ ಆಸ್ತಿ ₹146.31 ಕೋಟಿ. ಕಳೆದ ಐದು ವರ್ಷಗಳಲ್ಲಿ ಶೇಕಡ 68ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ.
ಫೆಬ್ರುವರಿ 27 ರಂದು ನಡೆಯಲಿರುವ ಚುನಾವಣೆಗೆ ಮೈರಾಂಗ್ ಕ್ಷೇತ್ರದಿಂದ ಕಣದಲ್ಲಿರುವ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ) ಮುಖ್ಯಸ್ಥ ಲಿಂಗ್ಡೋಹ್, 2018 ರ ವಿಧಾನಸಭೆ ಚುನಾವಣೆಯಲ್ಲಿ ₹ 87.26 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಮಾಡಿದೆ.
ಕಳೆದ ಐದು ವರ್ಷಗಳಲ್ಲಿ 60 ಸದಸ್ಯ ಬಲದ ಮೇಘಾಲಯ ವಿಧಾನಸಭೆಗೆ 68 ಜನರು ಆಯ್ಕೆಯಾಗಿದ್ದಾರೆ. 2018 ರ ಚುನಾವಣೆಯಲ್ಲಿ ಚುನಾಯಿತರಾದ 60 ಮಂದಿಯಲ್ಲದೆ, ಎಂಟು ಜನರು ಉಪಚುನಾವಣೆ ಮೂಲಕ ವಿಧಾನಸಭೆ ಪ್ರವೇಶಿಸಿದವರು. ಈ ಚುನಾವಣೆಯಲ್ಲಿ ಮತ್ತೆ ಕಣದಲ್ಲಿರುವ 61 ಜನರ ಆಸ್ತಿಯನ್ನು ವಿಶ್ಲೇಷಿಸಲಾಗಿದೆ ಎಂದು ವರದಿ ತಿಳಿಸಿದೆ.
ಈ 61 ಮರು-ಸ್ಪರ್ಧಿ ಶಾಸಕರ ಆಸ್ತಿ ಸರಾಸರಿ ಶೇಕಡ 77 ರಷ್ಟು ಹೆಚ್ಚಾಗಿದೆ. ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಆಸ್ತಿಯಲ್ಲಿ ₹5.33 ಕೋಟಿಯಿಂದ ₹14.06 ಕೋಟಿಗೆ ಹೆಚ್ಚಾಗಿದೆ.
ಸಚಿವ ಸ್ನಿಯಾವ್‌ಭಲಾಂಗ್ ಧರ್ ಆಸ್ತಿ ಕಳೆದ ಐದು ವರ್ಷಗಳಲ್ಲಿ ಗರಿಷ್ಠ ಶೇ 607 ರಷ್ಟು ಹೆಚ್ಚಾಗಿದೆ. ಎನ್‌ಪಿಪಿಯಿಂದ ನಾರ್ಟಿಯಾಂಗ್ ಕ್ಷೇತ್ರದಿಂದ ಚುನಾವಣೆಗೆ ಮರು ಸ್ಪರ್ಧಿಸುತ್ತಿರುವ ಧರ್ ಅವರು 2018 ರಲ್ಲಿ ₹6 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಈ ಸಲ ₹45 ಕೋಟಿ ಆಸ್ತಿ ಘೋಷಿಸಿದ್ದಾರೆ ಎಂದು ವರದಿ ಹೇಳಿದೆ.
ದಾಡೆಂಗ್ಗ್ರೆ ಕ್ಷೇತ್ರದ ಅಭ್ಯರ್ಥಿ ಸಚಿವ ಜೇಮ್ಸ್ ಪಿಕೆ ಸಂಗ್ಮಾ ಅವರ ಆಸ್ತಿ ₹7 ಕೋಟಿಯಿಂದ ₹ 53 ಕೋಟಿಗೆ ಏರಿಕೆಯಾಗಿದೆ.
61 ಅಭ್ಯರ್ಥಿಗಳಲ್ಲಿ 28 ಎನ್‌ಪಿಪಿ, 12 ಯುಡಿಪಿ, 10 ಟಿಎಂಸಿ, 7 ಬಿಜೆಪಿ ಮತ್ತು ಕಾಂಗ್ರೆಸ್ ಮತ್ತು ವಿಪಿಪಿಯ ತಲಾ ಓರ್ವ ಸ್ಪರ್ಧಿಗಳು ಕಣದಲ್ಲಿದ್ದಾರೆ.