ನವದೆಹಲಿ: ಫೆ.14 ರಂದು ಪ್ರೇಮಿಗಳ ದಿನದಂದು ವೈದಿಕ ಸಂಪ್ರದಾಯವನ್ನು ಸಂಭ್ರಮಿಸುವುದಕ್ಕಾಗಿ ಗೋವು ಅಪ್ಪಿಕೊಳ್ಳುವ ದಿನ (Cow Hug Day) ಆಚರಣೆಗೆ ನೀಡಿದ್ದ ಕರೆಯನ್ನು ಪ್ರಾಣಿ ಕಲ್ಯಾಣ ಮಂಡಳಿ ವಾಪಸ್ ಪಡೆದಿದೆ.
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ, ಫೆಬ್ರವರಿ 14 ರಂದು ಹಸುವನ್ನು ತಬ್ಬಿಕೊಳ್ಳುವ ದಿನ ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಹೊರಡಿಸಿದ ಮನವಿಯನ್ನು ಹಿಂಪಡೆಯಲಾಗಿದೆ ಎಂದು ಮಂಡಳಿಯ ಕಾರ್ಯದರ್ಶಿ ಎಸ್‌ಕೆ ದತ್ತಾ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
AWBI ಮನವಿಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಭಾರತೀಯ ಸಂಸ್ಕೃತಿ ಹಾಗೂ ಗ್ರಾಮೀಣ ಆರ್ಥಿಕತೆಗೆ ಹಸು ಬೆನ್ನೆಲುಬಾಗಿದೆ ಹಾಗೂ ಹಸು ನಮ್ಮ ಜೀವನಕ್ಕೆ ನೆರವಾಗುವ ಜಾನುವಾರು ಸಂಪತ್ತು ಮತ್ತು ಜೀವವೈವಿಧ್ಯತೆಯನ್ನು ಪ್ರತಿನಿಧಿಸುವ ಪ್ರಾಣಿಯಾಗಿದೆ. ಹಸು ಮನುಕುಲವನ್ನು ತಾಯಿಯಂತೆ ಪೋಷಣೆಯ ಪ್ರಕೃತಿ ಹೊಂದಿರುವುದರಿಂದ ಕಾಮಧೇನು ಹಾಗೂ ಗೋಮಾತೆ ಎಂದು ಕರೆಸಿಕೊಳ್ಳುತ್ತದೆ ಎಂದು ಪ್ರಾಣಿ ಕಲ್ಯಾಣ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪಶ್ಚಿಮದ ಸಂಸ್ಕೃತಿಯ ಪ್ರಗತಿಯಿಂದಾಗಿ ವೈದಿಕ ಸಂಪ್ರದಾಯಗಳು ಅಳಿವಿನ ಅಂಚಿನಲ್ಲಿದೆ. ಪಶ್ಚಿಮದ ನಾಗರಿಕತೆ ನಮ್ಮ ಭೌತಿಕ ಸಂಸ್ಕೃತಿ ಹಾಗೂ ಪರಂಪರೆಯನ್ನೇ ಮರೆಯುವಂತೆ ಮಾಡಿದೆ ಎಂದು ಮಂಡಳಿ ಹೇಳಿದೆ.
ಪ್ರಾಣಿ ಕಲ್ಯಾಣ ಮಂಡಳಿಯ ಪ್ರಕಾರ, ಹಸುವಿನಿಂದ ಸಿಗುವ ಅಪಾರ ಪ್ರಯೋಜನಗಳಿಂದಾಗಿ ಅದನ್ನು ಅಪ್ಪಿಕೊಳ್ಳುವುದರಿಂದ ಭಾವನಾತ್ಮಕ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ ಹಾಗೂ ವೈಯಕ್ತಿಕ ಹಾಗೂ ಸಾಮೂಹಿಕ ಸಂತೋಷವನ್ನು ಹೆಚ್ಚಿಸುತ್ತದೆ.