ಕೊಟ್ಟಾಯಂ: ಕೇರಳದ ಕಂಜಿರಪಲ್ಲಿಯ ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿ, ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಪೊಲೀಸ್ ಅಧಿಕಾರಿಗೆ ಈಗ ಭಾರೀ ಆಘಾತವೊಂದು ಎದುರಾಗಿದೆ. ಸೇವೆಯಿಂದಲೇ ವಜಾಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಶಿಹಾಬ್ ಅಮಾನತಾಗಿರುವ ಅಧಿಕಾರಿ. ಇಡುಕ್ಕಿಯಲ್ಲಿರುವ ಎಆರ್ ಕ್ಯಾಂಪ್ನಲ್ಲಿ ಸಿವಿಲ್ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಶಿಹಾಬ್ಗೆ ಇದೀಗ ಶೋಕಾಸ್ ನೋಟಿಸ್ ಕಳುಹಿಸಲಾಗಿದ್ದು, ಸೇವೆಯಿಂದ ಯಾಕೆ ವಜಾ ಮಾಡಬಾರದು ಎಂಬುದಕ್ಕೆ ವಿವರಣೆ ನೀಡುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಡಿಜಿಪಿ ನಿರ್ದೇಶನದಂತೆ ನೋಟಿಸ್ ಕಳುಹಿಸಲಾಗಿದ್ದು, 15 ದಿನಗಳ ಒಳಗೆ ವಿವರಣೆ ನೀಡಬೇಕಿದೆ. ಸರಿಯಾದ ವಿವರಣೆ ನೀಡದೇ ಇದ್ದಲ್ಲಿ ಕೆಲಸದಿಂದ ವಜಾಗೊಳ್ಳುವುದು ಖಚಿತವಾಗಿದೆ.
ಶಿಹಾಬ್, ಕಳೆದ ವರ್ಷ ಸೆ.30ರಂದು ಕಂಜಿರಪಲ್ಲಿಯ ಹಣ್ಣಿನ ಅಂಗಡಿಗೆ ನುಗ್ಗಿ ಮಾವಿನ ಹಣ್ಣುಗಳನ್ನು ಕಳವು ಮಾಡಿದ್ದರು. ಕೆಜಿಗೆ 600 ರೂ.ಮೌಲ್ಯದ ಸುಮಾರು 10 ಕೆಜಿ ಮಾವಿನ ಹಣ್ಣನ್ನು ಶಿಹಾಬ್ ಕದ್ದಿದ್ದರು. ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಯಿಂದ ಈ ಪ್ರಕರಣ ಬೆಳಕಿಗೆ ಬಂದಿತು. ಇದಾದ ಬಳಿಕ ಅಕ್ಟೋಬರ್ 3 ರಂದು ಕೇರಳ ಡಿಜಿಪಿ, ಆರೋಪಿ ಶಿಹಾಬ್ನನ್ನು ಅಮಾನತುಗೊಳಿಸಿದರು.
ಶಿಹಾಬ್ ಅಪರಾಧ ಹಿನ್ನೆಲೆಯನ್ನು ಸಹ ಹೊಂದಿದ್ದಾರೆ. 2019ರಲ್ಲಿ ಕಂಜಿರಪಲ್ಲಿಯ ಜನರಲ್ ಹಾಸ್ಪಿಟಲ್ನ ಮಹಿಳಾ ಉದ್ಯೋಗಿಯೊಬ್ಬರಿಗೆ ಮದುವೆ ಆಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪವಿದೆ. ಅಲ್ಲದೆ, ಜೈಲಿನಿಂದ ಹೊರಬಂದ ನಂತರ ಮಹಿಳೆಗೆ ಬೆದರಿಕೆ ಮತ್ತು ಹಲ್ಲೆಗೆ ಯತ್ನಿಸಿದ ಶಿಹಾಬ್ ವಿರುದ್ಧ ಮುಂಡಕ್ಕಯಂ ಪೊಲೀಸರು ದಾಖಲಿಸಿರುವ ಮತ್ತೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ.