ನವದೆಹಲಿ: ಕೋವಿಡ್ ಪಿಡುಗಿನ ನಂತರ ದೇಶದಲ್ಲಿ ಅಂಗಾಂಗ ಕಸಿ ಕುರಿತು ಜಾಗೃತಿ ಹೆಚ್ಚಿದೆ. ಇದೇ ಮೊದಲ ಬಾರಿ, ಕಳೆದ ವರ್ಷ ದಾಖಲೆಯ 15 ಸಾವಿರಕ್ಕೂ ಅಧಿಕ ಕಸಿ ಪ್ರಕ್ರಿಯೆಗಳನ್ನು ನೆರವೇರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ ಭೂಷಣ್ ಭಾನುವಾರ ಹೇಳಿದ್ದಾರೆ.
ಸಚಿವಾಲಯ ಆಯೋಜಿಸಿದ್ದ 'ರಾಷ್ಟ್ರೀಯ ಅಂಗಾಂಗ ಹಾಗೂ ಅಂಗಾಂಶ ಕಸಿ ಸಂಘಟನೆ (ಎನ್‌ಒಟಿಟಿಒ) ವೈಜ್ಞಾನಿಕ ಸಂವಾದ-2023' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ದೇಶದಲ್ಲಿ ನಡೆಯುವ ಕಸಿ ಶಸ್ತ್ರಚಿಕಿತ್ಸೆಗಳಲ್ಲಿ ವಾರ್ಷಿಕ ಶೇ 27ರಷ್ಟು ಹೆಚ್ಚಳ ಕಂಡುಬಂದಿದೆ' ಎಂದರು.
'ಅಂಗಾಂಗಗಳ ಕಸಿಗೆ ಸಂಬಂಧಿಸಿ ಮೂರು ಆದ್ಯತಾ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಕ್ರಮಬದ್ಧವಾದ ಪುನರ್‌ರಚನೆ, ಸಂವಹನ ಕಾರ್ಯತಂತ್ರ ಹಾಗೂ ವೃತ್ತಿಪರರ ಕೌಶಲ ವೃದ್ಧಿಗೆ ಆದ್ಯತೆ ನೀಡಬೇಕಿದೆ' ಎಂದು ಅವರು ಹೇಳಿದರು.