ಮುಂಬೈ: ಅಶೋಕ ವಿವಿಯ ಸೆಂಟರ್ ಫಾರ್ ಇಕನಾಮಿಕ್ ಡೇಟಾ ಆಯಂಡ್ ಅನಾಲಿಸಿಸ್ (CEDA)ನ ಸಂಶೋಧಕರು ಪ್ರಕಟಿಸಿರುವ ಅಧ್ಯಯನ ವರದಿಯೊಂದು ಭಾರತದ ತಯಾರಿಕೆ ಕ್ಷೇತ್ರದಲ್ಲಿನ ಪ್ರಮುಖ ಲಿಂಗ ಅಂತರವನ್ನು ಎತ್ತಿ ತೋರಿಸಿದೆ.
ಅಧ್ಯಯನವು 2019-20ರ ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ (ASI)ಯ ಡೇಟಾವನ್ನು ಆಧರಿಸಿದೆ.
2019-20ರಲ್ಲಿ ಭಾರತದಲ್ಲಿನ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ 80 ಲ.ಜನರ ಪೈಕಿ ಶೇ.20ಕ್ಕೂ ಕಡಿಮೆ ಮಹಿಳೆಯರಾಗಿದ್ದರು ಮತ್ತು ಕಳೆದ ಎರಡು ದಶಕಗಳಲ್ಲಿ ಮಹಿಳೆಯರ ಈ ಪಾಲಿನಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ ಎಂದು ಸಮೀಕ್ಷೆಯು ಹೇಳಿತ್ತು.
ಎಎಸ್‌ಐ
ತಯಾರಿಕೆ ಪ್ರಕ್ರಿಯೆಯಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಉದ್ಯೋಗಿಗಳಿಗೆ
ಸಂಬಂಧಿಸಿದಂತೆ ಮಾತ್ರ ಲಿಂಗ ವರ್ಗೀಕೃತ ಡೇಟಾವನ್ನು ಒದಗಿಸುತ್ತದೆ. ಗುತ್ತಿಗೆ ಆಧಾರದ
ಕಾರ್ಮಿಕರು ಅಥವಾ ಗುಮಾಸ್ತ, ಮೇಲ್ವಿಚಾರಣೆ,ವ್ಯವಸ್ಥಾಪನೆ, ಮಾರಾಟ ಮತ್ತು ಕಾವಲು
ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ಇಂತಹ ಡೇಟಾವನ್ನು ಅದು ಒದಗಿಸುವುದಿಲ್ಲ ಎಂದೂ ಅಧ್ಯಯನ
ವರದಿಯು ಎತ್ತಿ ತೋರಿಸಿದೆ.
ಸೋಮವಾರ ಪ್ರಕಟಗೊಂಡಿರುವ ಅಧ್ಯಯನ ವರದಿಯಲ್ಲಿ ಸಿಇಡಿಎದ
ಧ್ರುವಿಕಾ ಧಮಿಜಾ ಅವರು,ತಯಾರಿಕೆ ಕ್ಷೇತ್ರದಲ್ಲಿ ಮಹಿಳೆಯರ ಈ ಸಣ್ಣ ಪಾಲಿನಲ್ಲಿ
ವ್ಯಾಪಕ ಮತ್ತು ಕೈಗಾರಿಕಾವಾರು ಏರಿಳಿತಗಳ ಕುರಿತು ಬರೆದಿದ್ದಾರೆ.
ಭಾರತದಾದ್ಯಂತದ 16 ಲ.ಮಹಿಳಾ ಕಾರ್ಮಿಕರ ಪೈಕಿ 6.80 ಲ.(ಶೇ.43) ಮಹಿಳೆಯರು ತಮಿಳುನಾಡಿನ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ. ವಾಸ್ತವದಲ್ಲಿ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಎಲ್ಲ ಮಹಿಳೆಯರ ಶೇ.72ರಷ್ಟು ದಕ್ಷಿಣದ ರಾಜ್ಯಗಳಾದ ತಮಿಳುನಾಡು,ಕರ್ನಾಟಕ,ಆಂಧ್ರಪ್ರದೇಶ ಮತ್ತು ಕೇರಳಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಜೊತೆಗೆ ಲಿಂಗ ಅಂತರವು ವಿವಿಧ ರಾಜ್ಯಗಳಲ್ಲಿ ವ್ಯಾಪಕವಾಗಿ ಬದಲಾಗುತ್ತದೆ ಎಂದು ಹೇಳಿರುವ ಧಮಿಜಾ,ಮಣಿಪುರವು ತಯಾರಿಕೆ ಕ್ಷೇತ್ರದಲ್ಲಿ ದುಡಿಯುವವರ ನಡುವೆ ಲಿಂಗ ಸಮತೋಲನ ಹೊಂದಿರುವ ಏಕೈಕ ರಾಜ್ಯವಾಗಿದೆ. ಅಲ್ಲಿ 2019-20ರಲ್ಲಿ ಮಹಿಳಾ ಕಾರ್ಮಿಕರು ಶೇ.50.8ರಷ್ಟು ಪಾಲನ್ನು ಹೊಂದಿದ್ದರು. ನಂತರದ ಸ್ಥಾನಗಳಲ್ಲಿ ಕೇರಳ (ಶೇ.45.5),ಕರ್ನಾಟಕ (ಶೇ.41.8) ಮತ್ತು ತಮಿಳುನಾಡು (ಶೇ.40.4) ಇದ್ದವು ಎಂದು ಧಮಿಜಾ ವರದಿಯಲ್ಲಿ ತಿಳಿಸಿದ್ದಾರೆ.
ಛತ್ತೀಸ್ ಗಡ ಕನಿಷ್ಠ ಸ್ಥಾನದಲ್ಲಿದ್ದು,ಅಲ್ಲಿ ಕೈಗಾರಿಕಾ ಕಾರ್ಮಿಕ ಪಡೆಯಲ್ಲಿ ಕೇವಲ ಶೇ.2.9ರಷ್ಟು ಮಹಿಳೆಯರಿದ್ದರು. ಈ ಪ್ರಮಾಣ ದಿಲ್ಲಿಯಲ್ಲಿ ಶೇ.4.7,ಜಮ್ಮು-ಕಾಶ್ಮೀರ ಮತ್ತು ಪಶ್ಚಿಮ ಬಂಗಾಳಗಳಲ್ಲಿ ತಲಾ ಶೇ.5.5ರಷ್ಟಿತ್ತು ಎಂದು ವರದಿಯು ತಿಳಿಸಿದೆ.