ಕಾಸರಗೋಡು: ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶದನ್ವಯ ಕಾಸರಗೋಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೇತೃತ್ವದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಅದಾಲತ್‍ನಲ್ಲಿ ಒಟ್ಟು 4,105 ಪ್ರಕರಣಗಳನ್ನು ಪರಿಗಣಿಸಲಾಗಿದ್ದು, ಇದರಲ್ಲಿ 1,764 ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಒಟ್ಟು 4,16,93,153 ರೂ. ಮೊತ್ತ ಅರ್ಜಿದಾರರಿಗೆ ಪರಿಹಾರ ನಿಯಮಗಳ ಪ್ರಕಾರ ಪಾವತಿಸಲು ಒಪ್ಪಿಗೆ ನೀಡಲಾಯಿತು.
ಪರಿಗಣಿಸಲಾದ 491 ಮೋಟಾರು ಅಪಘಾತ ವಿಮೆ ಪ್ರಕರಣಗಳಲ್ಲಿ 65 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ವಿಮಾ ಕಂಪೆನಿಗಳು ದೂರುದಾರರಿಗೆ 2,54,37,500 ರೂ. ಪಾವತಿಸಲು ಒಪ್ಪಿಗೆ ನೀಡಿತು. ಪರಿಗಣಿಸಲಾದ 1112 ಬ್ಯಾಂಕ್ ವಸೂಲಾತಿ ಪ್ರಕರಣಗಳಲ್ಲಿ 150 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದರಲ್ಲಿ 98,98,105 ರೂ. ಮೊತ್ತ ಪಾವತಿಸಿ ಪ್ರಕರಣ ಮುಕ್ತಾಯಗೊಳಿಸಲು ಒಪ್ಪಿಗೆ ನೀಡಲಾಯಿತು. ಬಿಎಸ್ಸೆನ್ನೆಲ್‍ಗೆ ಸಂಬಂಧಿಸಿದ 721 ಪ್ರಕರಣಗಳನ್ನು ಪರಿಗಣಿಸಲಾಗಿದ್ದು, ಇದರಲ್ಲಿ 99 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಒಟ್ಟು 34,348 ರೂ. ದಂಡ ವಸೂಲಿ ನಡೆಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ 1513 ಸಣ್ಣಪುಟ್ಟ ಪ್ರಕರಣಗಳ ಪೈಕಿ 1409 ಪ್ರಕರಣಗಳು ಇತ್ಯರ್ಥವಾಗಿವೆ. ಒಟ್ಟು 32,92,208 ರೂಪಾಯಿ ದಂಡವನ್ನು ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅಲ್ಲದೆ ಕ್ರಿಮಿನಲ್ ಕಾಂಪೌಂಡಿಂಗ್ ಪ್ರಕರಣಗಳು, ಒಂದು ಜೀವನಾಂಶ ಪ್ರಕರಣ ಮತ್ತು ಬ್ಯಾಂಕ್ ಪ್ರಕರಣವನ್ನು ಇತ್ಯರ್ಥಗೊಳಿಸಿ ತೀರ್ಪು ಕಲ್ಪಿಸಲಾಯಿತು.
ರಾಷ್ಟ್ರೀಯ ಲೋಕ ಅದಾಲತ್: 1764 ಪ್ರಕರಣಗಳಿಗೆ ಪರಿಹಾರ
0
ಫೆಬ್ರವರಿ 16, 2023