ಅಂಕಾರಾ: ಯುದ್ಧದಿಂದ ಧ್ವಂಸಗೊಂಡ ಸಿರಿಯಾದ ಉತ್ತರ ಗಡಿಯಲ್ಲಿ ಮತ್ತು ದಕ್ಷಿಣ ಟರ್ಕಿಯಲ್ಲಿ ಸೋಮವಾರ ಮೂರನೇ ಬಾರಿ ಭೂಮಿ ಕಂಪಿಸಿದ್ದು, ಪ್ರಬಲ ಸರಣಿ ಭೂಕಂಪದಿಂದ 1800ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಮತ್ತು 6,500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಕಳೆದ 24 ಗಂಟೆಯಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು, ಸಾವಿರಾರು ಕಟ್ಟಡಗಳು ಧರೆಗುರುಳಿವೆ ಮತ್ತು ನೂರಾರು ಜನ ಜೀವಂತ ಸಮಾಧಿಯಾಗಿದ್ದಾರೆ. ಎರಡೂ ದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಮೊದಲ ಬಾರಿಗೆ ಬೆಳಗ್ಗೆ4 ಗಂಟೆಗೆ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಎರಡನೇ ಬಾರಿ 7.5 ತೀವ್ರತೆಯ ಭೂಕಂಪ ಸಂಭವಿಸಿದೆ. ಕೆಲವು ಗಂಟೆಗಳ ನಂತರ ಮಧ್ಯ ಟರ್ಕಿಯಲ್ಲಿ 6.0 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.
ಭೂಕಂಪನದಿಂದ ನೂರಾರು ಬಹುಮಹಡಿ ಕಟ್ಟಡಗಳು ನೆಲಕ್ಕುರುಳಿವೆ. ಪರಿಣಾಮ ಸಾವಿರಾರು ಜನ ಅದರ ಅವಶೇಷದಡಿ ಸಿಲುಕಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚು ಸಾಧ್ಯತೆ ಇದೆ.
ಭೂಕಂಪನದಿಂದ ಉಂಟಾಗಿರುವ ಜೀವಹಾನಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದು, ಈ ದುರಂತವನ್ನು ನಿಭಾಯಿಸುವುದಕ್ಕೆ ಭಾರತದಿಂದ ಸಾಧ್ಯವಾಗುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.