ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ಆರ್ಟಿಕಲ್ 370 ರದ್ದುಗೊಳಿಸಿದ 3 ವರ್ಷಗಳ ಬಳಿಕ ಏ.1 ರಿಂದ ಆಸ್ತಿ ತೆರಿಗೆ ವಿಧಿಸುವುದು ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಗೆ ಬರುತ್ತಿದೆ.
ಆಸ್ತಿ ತೆರಿಗೆ ವಿಧಿಸುವ ನಿರ್ಧಾರವನ್ನು ಜಮ್ಮು-ಕಾಶ್ಮೀರ ಆಡಳಿತ ತೆಗೆದುಕೊಂಡಿದೆ. ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆ ಇಂದು ಆಸ್ತಿ ತೆರಿಗೆ ವಿಧಿಸುವ ಬಗ್ಗೆ ಘೋಷಿಸಿದ್ದು, ಕೇಂದ್ರಾಡಳಿತ ಪ್ರದೇಶದ ಪುರಸಭೆಗಳು ಮತ್ತು ಮುನ್ಸಿಪಲ್ ಕೌನ್ಸಿಲ್ಗಳಲ್ಲಿ ಜಾರಿಗೆ ಬರಲಿದೆ.
ವಸತಿ ಹಾಗೂ ವಸತಿಯೇತರ ಆಸ್ತಿಗಳು ಆಸ್ತಿ ತೆರಿಗೆ ವ್ಯಾಪ್ತಿಗೆ ಬರುತ್ತಿದೆ. ಈ ಹಿಂದೆ ವಸತಿ ಆಸ್ತಿಗಳಿಗೆ ಸರ್ಕಾರ ವಿನಾಯ್ತಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ವಸತಿ ಆಸ್ತಿಯೊಂದಕ್ಕೆ ಆಸ್ತಿ ತೆರಿಗೆಯನ್ನು, ತೆರಿಗೆ ವಿಧಿಸಬಹುದಾದ ವಾರ್ಷಿಕ ಮೌಲ್ಯ (ಟಿಎವಿ) ಯ ಶೇ.5 ರಷ್ಟು ವಿಧಿಸಲಿದ್ದು, ವಸತಿಯಲ್ಲದ್ದಕ್ಕೆ ಶೇ.6 ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಪುರಸಭೆಯ ಪ್ರಕಾರದ ಅಂಶ + ಭೂ ಮೌಲ್ಯದ ಅಂಶ + ವಿಸ್ತೀರ್ಣದ ಅಂಶ + ಮಹಡಿ ಅಂಶ + ಬಳಕೆಯ ಪ್ರಕಾರ + ನಿರ್ಮಾಣದ ವಿಧದ ಅಂಶ + ಕಟ್ಟಡ ನಿರ್ಮಿಸಿದ ವರ್ಷ+ ಸ್ಲ್ಯಾಬ್ ಅಂಶ + ಇತರ ಬಳಕೆಯ ಪ್ರಕಾರಗಳ ಆಧಾರದ ಮೇಲೆ ಟಿಎವಿಯನ್ನು ಲೆಕ್ಕಹಾಕಲಾಗುತ್ತದೆ,” ಎಂದು ಸರ್ಕಾರದ ಅಧಿಸೂಚನೆ ಹೇಳಿದೆ.
ಖಾಲಿ ಭೂಮಿ, ರಚನೆ/ಕಟ್ಟಡಕ್ಕೆ ಪೂರಕವಾಗಿಲ್ಲದ ಆಸ್ತಿಗಳಿಗೆ ಸರ್ಕಾರ ವಿನಾಯ್ತಿ ನೀಡಿದ್ದು, ಪ್ರದೇಶದಲ್ಲಿ ಮಾಸ್ಟರ್ ಪ್ಲಾನ್ ಜಾರಿಯಲ್ಲಿದ್ದರೆ, ಅಂತಹ ಖಾಲಿ ಭೂಮಿಯಲ್ಲಿ ಯಾವುದೇ ನಿರ್ಮಾಣ/ಅಭಿವೃದ್ಧಿಯನ್ನು ಅನುಮತಿಸಲಾಗುವುದಿಲ್ಲ.
ದೇವಸ್ಥಾನಗಳು, ಮಸೀದಿಗಳು, ಗುರುದ್ವಾರಗಳು, ಚರ್ಚ್‌ಗಳು, ಜಿಯಾರಾತ್‌ಗಳು ಇತ್ಯಾದಿಗಳನ್ನು ಒಳಗೊಂಡಂತೆ ಪುರಸಭೆ ಮತ್ತು ಪೂಜಾ ಸ್ಥಳಗಳು ಮತ್ತು ಶವಸಂಸ್ಕಾರ ಮತ್ತು ಸಮಾಧಿ ಸ್ಥಳಗಳನ್ನು ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.