ನವದೆಹಲಿ: ಇತ್ತೀಚಿಗಷ್ಟೇ 300ಕ್ಕೂ ಅಧಿಕ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಏರ್ ಇಂಡಿಯಾ ಇದೀಗ 2023ರಲ್ಲಿ 5100 ಪೈಲಟ್ ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳ ನೇಮಕಕ್ಕೆ ಮುಂದಾಗಿದೆ.
ಟಾಟಾ ಗ್ರೂಪ್ ಒಡೆತನದ ಏರ್‌ಲೈನ್ ತನ್ನ ಫ್ಲೀಟ್ ಮತ್ತು ಕಾರ್ಯಾಚರಣೆಗಳನ್ನು ವಿಸ್ತರಿಸುವ ಯೋಜನೆಯ ಭಾಗವಾಗಿ ಇದೀಗ ಹಾಲಿ ವರ್ಷದಲ್ಲಿ 4,200 ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಮತ್ತು 900 ಪೈಲಟ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ.
ಈ ಹಿಂದೆ ಬೋಯಿಂಗ್ ಮತ್ತು ಏರ್‌ಬಸ್‌ನಿಂದ 70 ವೈಡ್-ಬಾಡಿ ಪ್ಲೇನ್‌ಗಳನ್ನು ಒಳಗೊಂಡಂತೆ 470 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದ ಏರ್ ಇಂಡಿಯಾ ಇದರ ಬೆನ್ನಲ್ಲೇ ಸಿಬ್ಬಂದಿ ನೇಮಕಕ್ಕೆ ಮುಂದಾಗಿದೆ. ಜನವರಿ 2022 ರಲ್ಲಿ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಂಡ ಬಳಿಕ 36 ವಿಮಾನಗಳನ್ನು ಗುತ್ತಿಗೆ ನೀಡಲು ಯೋಜಿಸಿದೆ ಮತ್ತು ಅವುಗಳಲ್ಲಿ ಎರಡು B 777-200 LR ಅನ್ನು ಈಗಾಗಲೇ ಸೇರ್ಪಡೆಗೊಳಿಸಲಾಗಿದೆ.
ಶುಕ್ರವಾರದ ಬಿಡುಗಡೆಯಾದ ಸಂಸ್ಥೆಯ ಹೇಳಿಕೆಯಲ್ಲಿ, ಏರ್ ಇಂಡಿಯಾ "2023 ರಲ್ಲಿ 4,200 ಕ್ಯಾಬಿನ್ ಸಿಬ್ಬಂದಿ ತರಬೇತಿದಾರರನ್ನು ಮತ್ತು 900 ಪೈಲಟ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ, ಏಕೆಂದರೆ ಏರ್‌ಲೈನ್ ಹೊಸ ವಿಮಾನಗಳನ್ನು ಸೇರಿಸುತ್ತಿದ್ದು, ಅದರ ದೇಶೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ತ್ವರಿತವಾಗಿ ವಿಸ್ತರಿಸುತ್ತದೆ ಎಂದು ಹೇಳಿದೆ.
ಈ ಹಿಂದೆ ಸಂಸ್ಥೆ ಮೇ 2022-ಫೆಬ್ರವರಿ 2023 ರ ನಡುವೆ, ವಿಮಾನಯಾನ ಸಂಸ್ಥೆಯು 1,900 ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಕಳೆದ ಏಳು ತಿಂಗಳುಗಳಲ್ಲಿ (ಜುಲೈ 2022-ಜನವರಿ 2023 ರ ನಡುವೆ) 1,100 ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಮತ್ತು ಕಳೆದ ಮೂರು ತಿಂಗಳಲ್ಲಿ, ಸುಮಾರು 500 ಕ್ಯಾಬಿನ್ ಸಿಬ್ಬಂದಿಯನ್ನು ವಿಮಾನಯಾನ ಸಂಸ್ಥೆಯು ಹಾರಾಟಕ್ಕಾಗಿ ಬಿಡುಗಡೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.
ಏರ್ ಇಂಡಿಯಾದ ವಿಮಾನ ಸೇವೆಗಳ ಮುಖ್ಯಸ್ಥ ಸಂದೀಪ್ ವರ್ಮಾ, ತಾಜಾ ಪ್ರತಿಭೆಗಳ ಸೇರ್ಪಡೆಯು ಏರ್‌ಲೈನ್‌ನಲ್ಲಿ ಸಾಂಸ್ಕೃತಿಕ ಪರಿವರ್ತನೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಪೈಲಟ್‌ಗಳು ಮತ್ತು ನಿರ್ವಹಣಾ ಎಂಜಿನಿಯರ್‌ಗಳ ನೇಮಕವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.