ಕೊಹಿಮಾ: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ನೂರು ಮಂದಿ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಾಗಾಲ್ಯಾಂಡ್‌ನಲ್ಲಿ ಚುನಾವಣೆ ರ್‍ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶವನ್ನು ಉತ್ತಮವಾಗಿ ಮುನ್ನಡೆಸುವ ವ್ಯಕ್ತಿ ತಾನೊಬ್ಬನೇ, ಬೇರೆ ಯಾರು ಇಲ್ಲ ಎಂದುಕೊಂಡಿದ್ದಾರೆ. ನಿಮ್ಮ ಈ ಎಲ್ಲಾ ನಂಬಿಕೆಗಳು ಮುಂದಿನ ಚುನಾವಣೆಯಲ್ಲಿ ಹುಸಿಯಾಗಲಿವೆ ಎಂದರು. ನೀವು ಸರ್ವಾಧಿಕಾರಿ ಅಲ್ಲ, ಜನರಿಂದ ಆಯ್ಕೆಯಾದ ನಿಮಗೆ ಜನರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಖರ್ಗೆ ಹೇಳಿದರು.
ಬಿಜೆಪಿಯನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳು ಒಂದಾಗಬೇಕು. ರಾಷ್ಟ್ರೀಯ ಮಟ್ಟದ ಈ ಮಹಾಮೈತ್ರಿಕೂಟಕ್ಕೆ ಕಾಂಗ್ರೆಸ್ ನಾಯಕತ್ವ ನೀಡಲಿದೆ ಎಂದರು. ಬಿಜೆಪಿಯನ್ನು ಸೋಲಿಸದಿದ್ದರೇ, ದೇಶದಲ್ಲಿ ಸಮಾನತೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಯುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದರು.
ಇಡೀ ದೇಶವೇ ಒಪ್ಪಿಕೊಂಡ ಏಕೈಕ ನಾಯಕ ನಾನೇ. ನನ್ನ ಮುಟ್ಟಲು ಬೇರೆ ಯಾರಿಗೂ ಸಾಧ್ಯವಿಲ್ಲ ಎಂದು ಈ ಹಿಂದೆ ನರೇಂದ್ರ ಮೋದಿ ಹಲವಾರು ಸಲ ಹೇಳಿದ್ದಾರೆ. ಯಾವುದೇ ಪ್ರಜಾಪ್ರಭುತ್ವವಾದಿ ಹೀಗೆ ಹೇಳುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ, ಮೋದಿ ವಿರುದ್ಧ ಗುಡುಗಿದ್ದಾರೆ.
ಭಾರತವು ಪ್ರಜಾತಂತ್ರ ವ್ಯವಸ್ಥೆ ಹೊಂದಿದ್ದು, ನಿಮ್ಮ ಸರ್ವಾಧಿಕಾರಿ ವರ್ತನೆಗೆ ದೇಶದ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಖರ್ಗೆ ಹರಿಹಾಯ್ದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಖರ್ಗೆ ಅವರು ನಾಗಾಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಇಲ್ಲಿ ಹಲವಾರ ಚುನಾವಣೆ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಫೆಬ್ರುವರಿ 27ರಂದು ಇಲ್ಲಿ ಮತದಾನ ನಡೆಯಲಿದೆ.