ನವದೆಹಲಿ:ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಅವರು ಜಗತ್ತಿನ ಮೂರನೇ ಶ್ರೀಮಂತ ವ್ಯಕ್ತಿ ಸ್ಥಾನದಿಂದ ಕುಸಿದು ಇದೀಗ ಜಗತ್ತಿನ ಟಾಪ್ 20 ಶ್ರೀಮಂತರ ಪಟ್ಟಿಯಿಂದಲೂ ಹೊರಬಿದ್ದಿದ್ದಾರೆ.
ಅಮೆರಿಕಾದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಅದಾನಿ ಸಮೂಹ ಸಂಸ್ಥೆಗಳಲ್ಲಿ ವ್ಯಾಪಕ ಲೆಕ್ಕಪತ್ರ ಸಂಬಂಧಿತ ಹಾಗೂ ಷೇರು ಮೌಲ್ಯ ಸಂಬಂಧಿತ ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸುವ ತನ್ನ ಸಂಶೋಧನಾ ವರದಿಯನ್ನು ಕಳೆದ ವಾರ ಹೊರತಂದಂದಿನಿಂದ ಅದಾನಿ ಷೇರುಗಳ ಮೌಲ್ಯ ಪಾತಾಳಕ್ಕಿಳಿಯುತ್ತಿವೆ.
ಷೇರು ಮಾರುಕಟ್ಟೆಯಲ್ಲಿ ಇಂದು ಕೂಡ ಅದಾನಿ ಸಂಸ್ಥೆ ಷೇರುಗಳ ಮೌಲ್ಯ ಕುಸಿಯುತ್ತಿದ್ದು ಸಂಸ್ಥೆಯ ಮುಖ್ಯಸ್ಥ ಗೌತಮ್ ಅದಾನಿ ಅವರ ಒಟ್ಟು ಸಂಪತ್ತಿನ ಮೌಲ್ಯ ಜನವರಿ17 ರಂದು 124 ಬಿಲಿಯನ್ ಡಾಲರ್ ಇದ್ದರೆ ಇಂದು 61.3 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ.
ಬ್ಲೂಂಬರ್ಗ್ ಶ್ರೀಮಂತರ ಪಟ್ಟಿಯಲ್ಲಿ ಈಗ ಅದಾನಿ ಅವರು 21ನೇ ಸ್ಥಾನದಲ್ಲಿದ್ದಾರೆ.
ಒಮ್ಮೆ ಭಾರತದ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದ ಅದಾನಿ ಈಗ ತಮ್ಮ ಟಾಪ್ ಪಟ್ಟ ಕಳೆದುಕೊಂಡು ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಏಷ್ಯಾದ ಮೂರನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.