ನವದೆಹಲಿ : ಮಹಾರಾಷ್ಟ್ರದ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ ಯೋಜನೆ ಮತ್ತು ಮಿಜೋರಾಂನ ಸೂಪರ್-ಸ್ಪೆಷಾಲಿಟಿ ಕ್ಯಾನ್ಸರ್ ಮತ್ತು ಸಂಶೋಧನಾ ಕೇಂದ್ರಕ್ಕಾಗಿ ಭಾರತಕ್ಕೆ ₹2,288 ಕೋಟಿ ಸಾಲ ನೀಡುವುದಾಗಿ ಜಪಾನ್ ಹೇಳಿದೆ.
ಮಹಾರಾಷ್ಟ್ರದ ಯೋಜನೆಗಾಗಿ ₹1,728 ಕೋಟಿ ಮತ್ತು ಮಿಜೋರಾಂನಲ್ಲಿ ಕ್ಯಾನ್ಸರ್ ಕೇಂದ್ರವನ್ನು ಅಭಿವೃದ್ಧಿಪಡಿಸಲು ಸುಮಾರು ₹560 ಕೋಟಿ ಜಪಾನ್ ನೀಡಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ ಯೋಜನೆ ಮುಂಬೈಯನ್ನು ನವಿ ಮುಂಬೈನೊಂದಿಗೆ ಸಂಪರ್ಕಿಸುವ ಮೂಲಕ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದು ಮುಂಬೈ ಮಹಾನಗರಿಯ ಸಂಚಾರ ದಟ್ಟಣೆಯನ್ನು ತಗ್ಗಿಸಲು ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಉತ್ತೇಜಿಸಲು ಸಹಕಾರಿಯಾಗಿದೆ.
ಮಿಜೋರಾಂನಲ್ಲಿರುವ ಕ್ಯಾನ್ಸರ್ ಸಂಶೋಧನೆ ಕೇಂದ್ರ ಕ್ಯಾನ್ಸರ್ ತಡೆಗಟ್ಟುವಿಕೆ, ಪತ್ತೆ ಮತ್ತು ಚಿಕಿತ್ಸೆ ಸುಧಾರಿಸುವ ಗುರಿಯನ್ನು ಹೊಂದಿದೆ. ಭಾರತ ಮತ್ತು ಜಪಾನ್ 1958 ರಿಂದ ದ್ವಿಪಕ್ಷೀಯ ಅಭಿವೃದ್ಧಿ ಸಹಕಾರದ ಸುದೀರ್ಘ ಇತಿಹಾಸವನ್ನು ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ.