ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದು, ಅತ್ಯಂತ ವೇಗವಾಗಿ 25000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾನುವಾರ ಮತ್ತೊಂದು ದೊಡ್ಡ ಸಾಧನೆ ಮಾಡಿದ್ದು, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25000 ರನ್ ಪೂರೈಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ 2 ಸಾವಿರ ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಮತ್ತು ವಿಶ್ವದ ಆರನೇ ಬ್ಯಾಟ್ಸ್‌ಮನ್ ಆಗಿದ್ದಾರೆ.
ವಿಶೇಷವೆಂದರೆ ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಅಂದರೆ 549 ಇನ್ನಿಂಗ್ಸ್‌ಗಳಲ್ಲಿ 53.7 ಸರಾಸರಿಯಲ್ಲಿ 25000 ರನ್ ಪೂರೈಸಿದ್ದಾರೆ ಮತ್ತು ಇದರೊಂದಿಗೆ ವೇಗವಾಗಿ 25 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾನುವಾರ ರಾಜಧಾನಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಕಿಂಗ್ ಕೊಹ್ಲಿ ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.
ಭಾರತದ ಎರಡನೇ ಇನ್ನಿಂಗ್ಸ್‌ನ 12 ನೇ ಓವರ್‌ನಲ್ಲಿ, ಕೊಹ್ಲಿ ನಾಥನ್ ಲಿಯಾನ್ ಅವರ ಓವರ್‌ನ ಮೊದಲ ಎಸೆತವನ್ನು ಲಾಂಗ್ ಆನ್ ಕಡೆಗೆ ಹೊಡೆದು ಬೌಂಡರಿ ಗಿಟ್ಟಿಸಿದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ ರನ್ ಗಳಿಕೆಯನ್ನು 25,012ರನ್ ಗಳಿಗೆ ಏರಿಸಿಕೊಂಡರು. ಈ ಪೈಕಿ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 106 ಪಂದ್ಯಗಳಿಂದ 8,195ರನ್ ಗಳಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ 271 ಪಂದ್ಯಗಳಿಂದ 12809 ರನ್ ಗಳಿಸಿದ್ದಾರೆ. ಅಂತೆಯೇ ಟಿ20 ಕ್ರಿಕೆಟ್ ನಲ್ಲಿ 115 ಪಂದ್ಯಗಳಿಂದ 4008 ರನ್ ಗಳಿಸಿದ್ದಾರೆ. ಒಟ್ಟಾರೆ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ 25,000 ರನ್‌ಗಳ ಗಡಿಯನ್ನು ವೇಗವಾಗಿ ದಾಟಿದರು. ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ 31 ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಾಯದಿಂದ 20 ರನ್ ಗಳಿಸಿದರು. ಬಳಿಕ ಅವರು ಆಸಿಸ್ ಬೌಲರ್ ಟಾಡ್ ಮರ್ಫಿ ಅವರಿಂದ ಸ್ಟಂಪ್ ಔಟ್ ಆದರು.
ಭಾರತದ 2ನೇ ಬ್ಯಾಟರ್
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25000 ರನ್‌ಗಳ ಗಡಿ ದಾಟಿದ ಎರಡನೇ ಭಾರತೀಯ
ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಿದ್ದಾರೆ. ಇವರಿಗಿಂತ ಮೊದಲು ಸಚಿನ್
ತೆಂಡೂಲ್ಕರ್ ಮಾತ್ರ ಈ ಸಾಧನೆ ಮಾಡಿದ್ದಾರೆ. ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ
782 ಇನ್ನಿಂಗ್ಸ್‌ಗಳಲ್ಲಿ 48.5 ಸರಾಸರಿಯಲ್ಲಿ 34357 ರನ್ ಗಳಿಸಿದ್ದಾರೆ.
ಜಗತ್ತಿನ 6ನೇ ಆಟಗಾರ
ಸಚಿನ್ ಮತ್ತು ವಿರಾಟ್ ಹೊರತಾಗಿ, ವಿಶ್ವದ ಇತರ ಬ್ಯಾಟ್ಸ್‌ಮನ್‌ಗಳೆಂದರೆ ಶ್ರೀಲಂಕಾದ
ಕುಮಾರ ಸಂಗಕ್ಕಾರ (28016), ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (27483), ಶ್ರೀಲಂಕಾದ
ಮಹೇಲಾ ಜಯವರ್ಧನೆ (25957) ಮತ್ತು ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್ (25534) ಕೂಡ
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25000 ರನ್‌ಗಳ ಗಡಿ ದಾಟಿದ್ದಾರೆ.