ನವದೆಹಲಿ: ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಅವರು ಫೆಬ್ರುವರಿ 25 ಮತ್ತು 26ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಚಾನ್ಸಲರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಅವರು ಭಾರತದ ಪ್ರವಾಸ ಕೈಗೊಂಡಿದ್ದಾರೆ.
25ರಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಓಲಾಫ್ ಅವರಿಗೆ ವಿದ್ಯುಕ್ತ ಸ್ವಾಗತ ನಡೆಯಲಿದ್ದು, ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ.
'26ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. 25ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಓಲಾಫ್ ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ' ಎಂದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಇಎಫ್) ಮಾಹಿತಿ ನೀಡಿದೆ.
2011ರಲ್ಲಿ ದ್ವೈವಾರ್ಷಿಕ ಅಂತರಸರ್ಕಾರಿ ಸಮಾಲೋಚನೆ (ಐಜಿಸಿ) ಕಾರ್ಯವಿಧಾನವನ್ನು ಪ್ರಾರಂಭಿಸಿದ ಬಳಿಕ ಜರ್ಮನಿಯ ಚಾನ್ಸಲರ್ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಐಜಿಸಿಯು ಉಭಯ ದೇಶಗಳ ನಡುವಿನ ಸರ್ಕಾರದ ಚೌಕಟ್ಟಿನಲ್ಲಿ ನಡೆಯುವ ಕಾರ್ಯವಿಧಾನವಾಗಿದೆ. ಇದರ ಅಡಿಯಲ್ಲಿ ಉಭಯದೇಶಗಳ ಸಚಿವರು ತಮ್ಮ ಕ್ಷೇತ್ರಗಳ ಕುರಿತು ಚರ್ಚೆಗಳನ್ನು ನಡೆಸುತ್ತಾರೆ.