ಪುತ್ತೂರು: ಮೂರು ವರ್ಷಗಳಲ್ಲಿ ದೇಶದಲ್ಲಿ 2 ಲಕ್ಷ ಹೊಸ ಪ್ರಾಥಮಿಕ ಕೃಷಿ ಕ್ರೆಡಿಟ್ ಸೂಸೈಟಿ ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ವಿವೇಕಾನಂದ ಕಾಲೇಜು ಮೈದಾನದಲ್ಲಿ ಕ್ಯಾಂಪ್ಕೊ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿ, ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಹಿತ ಕಾಯುತ್ತಿದೆ. ರೈತರು ಮತ್ತು ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಬಜೆಟ್ ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರತಿ ಪಂಚಾಯಿತಿಯಲ್ಲಿ ಬಹು ಆಯಾಮದ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ ಸ್ಥಾಪನೆಗೆ ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಪ್ರತಿಯೊಂದು ಪಂಚಾಯಿತಿಯೂ ಒಂದು ಸೊಸೈಟಿ ಹೊಂದಲಿವೆ ಎಂದು ತಿಳಿಸಿದರು.
ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಪಿಎಫ್ ಐ ಸಂಘಟನೆ ಬ್ಯಾನ್ ಮಾಡುವ ಮೂಲಕ ಭದ್ರತೆ ಒದಗಿಸಲಾಗಿದೆ. ಕರ್ನಾಟಕದಲ್ಲಿ ಇದೀಗ ನೆಮ್ಮದಿ, ಶಾಂತಿ ಇದೆ. ಭಯೋತ್ಪಾದನೆ, ನಕ್ಸಲರನ್ನು ಯಶಸ್ವಿಯಾಗಿ ಮಟ್ಟ ಹಾಕಿರುವುದಾಗಿ ತಿಳಿಸಿದ ಅಮಿತ್ ಶಾ, ದೇಶ ವಿರೋಧಿ ಚಟುವಟಿಕೆಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ವೋಟ್ ಬ್ಯಾಂಕ್ ಗಾಗಿ ಟಿಪ್ಪು ಜಯಂತಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಪರಿವಾರ ರಾಜಕಾರಣ ಮಾಡುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಜನತೆ ಈ ಎರಡೂ ಪಕ್ಷಗಳಿಗೆ ಮತ ನೀಡದೆ, ರಾಣಿ ಅಬ್ಬಕನನ್ನು ಆರಾಧಿಸುವ ಬಿಜೆಪಿಗೆ ಮತ ನೀಡಬೇಕು, ರಾಜ್ಯದಲ್ಲಿ ಮತ್ತೆ ಪ್ರಚಂಡ ಗೆಲುವಿನೊಂದಿಗೆ ಬಿಜೆಪಿ ಅಧಿಕಾರಕ್ಕೆ ತರಲು ಸಂಕಲ್ಪ ಮಾಡುವಂತೆ ಜನರಲ್ಲಿ ಮನವಿ ಮಾಡಿದರು.
ಮಂಗಳೂರು ಪವಿತ್ರವಾದ ಭೂಮಿಯಾಗಿದ್ದು, ದಕ್ಷಿಣ ಕರ್ನಾಟಕಕ್ಕೆ ದೊಡ್ಡ ಸಂಸ್ಕೃತಿಯೇ ಇದೆ. ಕಾಂತಾರ ಸಿನಿಮಾ ನೋಡಿದ ಬಳಿಕ ಇಲ್ಲಿನ ಸಮೃದ್ಧ ಪರಂಪರೆ ಗೊತ್ತಾಯಿತು ಎಂದು ತಿಳಿಸಿದ ಅಮಿತ್ ಶಾ, ಗುಜರಾತಿನಲ್ಲಿ ತುಂಬಾ ಜನರು ಮಂಗಳೂರಿನ ಅಡಿಕೆ ತಿನ್ನುತ್ತಾರೆ. ಪಂಡಿತ್ ದೀನ ದಯಾಳ್ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶ ಸುಭದ್ರವಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅಡಿಕೆ ಸಂಶೋಧನಾ ಕೇಂದ್ರ ಗಟ್ಟಿಗೊಳಿಸಲು ಬದ್ದವಾಗಿದ್ದು, ಬಜೆಟ್ ನಲ್ಲಿ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.