ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದ ವಿರುದ್ಧದ ಮೇಲ್ಮನವಿಗಳ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
2002 ರ ಗುಜರಾತ್ ಗಲಭೆ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಇಂಡಿಯಾ: ದಿ ಮೋದಿ ಕ್ವೆಷನ್ ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಯೂಟ್ಯೂಬ್ನಲ್ಲಿ ತೆಗೆದುಹಾಕುವ ನಿರ್ಧಾರದ ಮೂಲ ದಾಖಲೆಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂಎಂ ಸುಂದ್ರೇಶ್ ಅವರ ಪೀಠವು ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಮೂರು ವಾರಗಳ ಕಾಲಾವಕಾಶವನ್ನು ನೀಡಿದ್ದು, ಏಪ್ರಿಲ್'ನಲ್ಲಿ ಮುಂದಿನ ವಿಚಾರಣೆ ನಡೆಸಿರುವುದಾಗಿ ತಿಳಿಸಿದೆ
ಸಂಸದ ಮಹುವಾ ಮೊಯಿತ್ರಾ, ಪತ್ರಕರ್ತ ಎನ್ ರಾಮ್ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರು ಜಂಟಿಯಾಗಿ ಸಲ್ಲಿಸಿದ ಎರಡು ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ,
ನಾವು ನೋಟಿಸ್‌ಗಳನ್ನು ನೀಡುತ್ತಿದ್ದೇವೆ. ಮೂರು ವಾರಗಳಲ್ಲಿ ಪ್ರತಿವಾದ ಅಫಿಡವಿಟ್ ಸಲ್ಲಿಸಬೇಕು. ಅದರ ನಂತರ ಎರಡು ವಾರಗಳಲ್ಲಿ ಮರುಪರಿಶೀಲನೆ ಮಾಡಲಾಗುವುದು ಎಂದು ಪೀಠ ಹೇಳಿದೆ. ಈ ವಿಷಯವನ್ನು ಏಪ್ರಿಲ್‌ನಲ್ಲಿ ಮುಂದಿನ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.