ನವದೆಹಲಿ: ಇಎಂಎಫ್(ಎಲೆಕ್ಟ್ರೊಮ್ಯಾಗ್ನೆಟಿಕ್ ಫ್ರೀಕ್ವೆನ್ಸಿ)ವಿಕಿರಣ ಹೊರಸೂಸುವ ಪ್ರಮಾಣದ ನಿಗದಿತ ಮಿತಿಯನ್ನು ಮೀರಿದ 320 ಮೊಬೈಲ್ ಟವರ್‌ಗಳು ಪತ್ತೆಯಾಗಿವೆ ಎಂದು ಶುಕ್ರವಾರ ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈ ಸಂಬಂಧ, ಡಿಸೆಂಬರ್ 2022ರಲ್ಲಿ ದೇಶದಾದ್ಯಂತ 11.6ಲಕ್ಷ ಬಿಟಿಎಸ್‌ಗಳನ್ನು(ಬೇಸ್ ಟ್ರಾನ್ಸ್ಸಿವರ್ ಸ್ಟೇಶನ್) ಟೆಲಿಕಾಂ ಇಲಾಖೆಯ ಕ್ಷೇತ್ರ ಘಟಕಗಳು ಪರೀಕ್ಷಿಸಿವೆ ಎಂದು ಅದು ತಿಳಿಸಿದೆ.
ಇಎಂಎಫ್ ಮಿತಿ ಮೀರಿದ ವಿಕಿರಣ ಹೊರಸೂಸುತ್ತಿದ್ದ ಮೊಬೈಲ್ ಟವರ್‌ಗಳ ಟೆಲಿಕಾಂ ಕಂಪನಿಗಳಿಂದ ಡಿಸೆಂಬರ್‌ನಲ್ಲಿ ₹13.10 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ಟೆಲಿಕಾಂ ಖಾತೆಯ ರಾಜ್ಯ ಸಚಿವ ದೇವುಸಿನ್ಹ ಚೌಹಾಣ್ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ದಂಡದ ಮೂಲಕ ಸಂಗ್ರಹಿಸಿದ ಮೊತ್ತವನ್ನು ಭಾರತದ ಕನ್ಸಾಲಿಡೇಟೆಡ್ ಫಂಡ್‌ಗೆ ಜಮಾ ಮಾಡಲಾಗಿದೆ.
'ಯಾವುದೇ ನಿಯಮ ಉಲ್ಲಂಘನೆಯ ಮೇಲ್ವಿಚಾರಣೆ ನಡೆಸಲು ಸರ್ಕಾರವು ಉತ್ತಮವಾದ ರಚನಾತ್ಮಕ ಪ್ರಕ್ರಿಯೆ ಮತ್ತು ಕಾರ್ಯವಿಧಾನವನ್ನು ಜಾರಿಗೆ ತಂದಿದೆ. ಆದ್ದರಿಂದ, ಟೆಲಿಕಾಂ ಸೇವಾ ಪೂರೈಕೆದಾರರು ಬಿಟಿಎಸ್‌ಗಳನ್ನು ಸ್ಫಾಪಿಸುವ ಮೊದಲು ಸ್ವಯಂ-ಪ್ರಮಾಣಪತ್ರವನ್ನು ಸಲ್ಲಿಸುವುದು ಸೇರಿದಂತೆ ನಿಗದಿತ ಮಾನದಂಡಗಳಿಗೆ ಬದ್ಧರಾಗಿರುತ್ತಾರೆ' ಎಂದು ಚೌಹಾಣ್ ಹೇಳಿದರು.
ದೂರಸಂಪರ್ಕ ಇಲಾಖೆಯ (ಡಿಒಟಿ) ಕ್ಷೇತ್ರ ಘಟಕಗಳು ಪ್ರತಿ ವರ್ಷ ಬಿಟಿಎಸ್‌ಗಳ ಇಎಂಎಫ್ ಆಡಿಟ್ ನಡೆಸುತ್ತವೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಇಎಂಎಫ್ ಹೊರಸೂಸುವ ಘಟಕಗಳಿಗೆ ದಂಡ ವಿಧಿಸಲಾಗುತ್ತದೆ.