ನವದೆಹಲಿ: ಭಾರತೀಯ ಸೇನೆ ವನ್ಯಜೀವಿ ಎನ್‌ಜಿಒ ಜತೆಗೆ 'ಆಪರೇಷನ್ ಮೋತಿ'ಯೊಂದಿಗೆ ಕೈಜೋಡಿಸಿ ಗಂಭೀರ ಸ್ಥಿತಿಯಲ್ಲಿದ್ದ 35 ವರ್ಷದ ಆನೆಯ ಚಿಕಿತ್ಸೆಗೆ ನೆರವಾಗಿರುವ ಅಪರೂಪದ ಘಟನೆಯೊಂದು ನಡೆದಿದೆ. 'ಮೋತಿ' ಎಂಬ ಆನೆಯು ಉತ್ತರಾಖಂಡದಲ್ಲಿ ಶಕ್ತಿ ಇಲ್ಲದೆ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.
ವನ್ಯಜೀವಿ ಎಸ್‌ಒಎಸ್‌ನ ವೈದ್ಯಕೀಯ ತಂಡವು ಕಳೆದ ಜನವರಿ 22ರಿಂದ ಆನೆಯ ಆರೋಗ್ಯದ ಬಗ್ಗೆ ಆರೈಕೆ ಮಾಡುತ್ತಿದೆ. ಸದ್ಯ ದಿನದಿಂದ ದಿನಕ್ಕೆ ಆನೆಯ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದು, ಎದ್ದು ನಿಲ್ಲಲು ಸಾಧ್ಯವಾಗದಂತಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಪಾದಗಳು ಸವೆದುಹೋಗಿವೆ ಹೋಗಿವೆ. ಹೀಗಾಗಿ ನಡೆಯಲೂ ಸಾಧ್ಯವಿಲ್ಲದಂತಾಗಿದೆ.
ಇದೀಗ ಆನೆಯ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ, ವನ್ಯಜೀವಿ SOS ತಂಡವು ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಅವರ ಸಹಾಯದಿಂದ ಭಾರತೀಯ ಸೇನೆಗೆಯ ಸಹಾಯಕೋರಿದೆ. ಆನೆ ಎದ್ದು ನಿಂತರೆ ಮಾತ್ರ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿತ್ತು. ಆದರೆ ತೀವ್ರ ಬಳಲಿಕೆಯಿಂದ ಎದ್ದು ನಿಲ್ಲಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ಆನೆ ದಿನಕಳೆಯುತ್ತಿತ್ತು. ಇದೀಗ ರೂರ್ಕಿಯ ಭಾರತೀಯ ಸೇನೆಯ ಇಂಜಿನಿಯರಿಂಗ್ ಸಿಬ್ಬಂದಿ ತಂಡವು ಆನೆ ಎದ್ದು ನಿಲ್ಲಲು ಸಹಾಯವಾಗುವ ತಾತ್ಕಾಲಿಕ ವ್ಯವಸ್ಥೆಯನ್ನು ನಿರ್ಮಿಸಿಕೊಟ್ಟಿದೆ.
ಎನ್‌ಜಿಒ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಸೇನೆಯ ಕಾರ್ಯದ ಬಗ್ಗೆ ಇದೀಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.