ನವದೆಹಲಿ: ದೇಶದ ಬಹುತೇಕ ರಾಜ್ಯಗಳಲ್ಲಿ ಮನಸ್ಸಿಗೆ ಬಂದಂತೆ ರಸ್ತೆ ಅಗೆಯುವುದ
ರಿಂದ
ದೂರಸಂಪರ್ಕ ವಲಯಕ್ಕೆ ವಾರ್ಷಿಕ ₹3 ಸಾವಿರ ಕೋಟಿ ನಷ್ಟ ಉಂಟಾಗುತ್ತಿದೆ. ಇನ್ನು ಮುಂದೆ
ರಸ್ತೆ ಅಗೆಯುವ ಮುನ್ನ ಸಂಬಂಧಿಸಿದ ಇಲಾಖೆಗಳು ಅನುಮತಿ ಪಡೆಯುವುದು ಕಡ್ಡಾಯ ಎಂದು
ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಈ ಸಂಬಂಧ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ದೂರಸಂಪರ್ಕ ಸಚಿವಾಲಯದ ಕಾರ್ಯದರ್ಶಿ ಕೆ.ರಾಜಾರಾಮನ್, 'ದೇಶದಲ್ಲಿ ಮೂಲಸೌಕರ್ಯ ಒದಗಿಸಲು ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಗಳನ್ನು ಹಲವು ಇಲಾಖೆಗಳು ಅಗೆಯುತ್ತಿವೆ. ಇದರಿಂದಾಗಿ, ಈಗಾಗಲೇ ಇರುವ ಮೂಲಸೌಕರ್ಯಗಳಿಗೆ ಹಾನಿ ಆಗುತ್ತಿದೆ. ಜತೆಗೆ, ದೊಡ್ಡ ಪ್ರಮಾಣದ ವಾಣಿಜ್ಯ ಹಾಗೂ ಆರ್ಥಿಕ ನಷ್ಟ ಉಂಟಾಗುತ್ತಿದೆ. ಸಾರ್ವಜನಿಕರು ಪಡಿಪಾಟಲು ಅನುಭವಿಸುತ್ತಿದ್ದಾರೆ. ಇದಕ್ಕೆ ಈಗಿರುವ ಮೂಲಸೌಕರ್ಯ ವ್ಯವಸ್ಥೆಗಳ ಮಾಹಿತಿ ಕೊರತೆ ಹಾಗೂ ಸಾಮಾನ್ಯ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಇಲ್ಲದಿರುವುದು ಕಾರಣ' ಎಂದು ತಿಳಿಸಿದ್ದಾರೆ.
ರಸ್ತೆ ಅಗೆಯುವುದರಿಂದ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ), ನೀರಿನ ಪೈಪ್‌ಲೈನ್, ವಿದ್ಯುತ್ ಕೇಬಲ್ ಹಾಗೂ ಅನಿಲ ಪೈಪ್‌ಲೈನ್‌ಗೆ ಹಾನಿ ಆಗುತ್ತಿದೆ. ದೂರಸಂಪರ್ಕ ವಲಯದಲ್ಲೇ ವರ್ಷಕ್ಕೆ 10 ಲಕ್ಷ ಆಪ್ಟಿಕಲ್ ಫೈಬರ್ ಕೇಬಲ್‌ಗಳು ತುಂಡಾಗುತ್ತಿವೆ. ಅದೇ ರೀತಿ, ನೀರಿನ ಪೈಪ್‌ಲೈನ್, ವಿದ್ಯುತ್ ಹಾಗೂ ಒಳಚರಂಡಿ ಪೈಪ್‌ಲೈನ್‌ಗೆ ತೊಂದರೆ ಆಗುತ್ತಿದೆ. ಇದಕ್ಕೆ ಇಲಾಖೆಗಳ ಸಮನ್ವಯದ ಕೊರತೆ ಸಹ ಕಾರಣ ಎಂದು ಬೊಟ್ಟು ಮಾಡಿದ್ದಾರೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ದೂರಸಂಪರ್ಕ ಸಚಿವಾಲಯವು 'ಕಾಲ್ ಬಿಫೋರ್ ಯು ಡಿಗ್' ಆಯಪ್ ಅಭಿವೃದ್ಧಿಪಡಿಸುತ್ತಿದೆ. ಗುಜರಾತ್ ರಾಜ್ಯ, ದಾದ್ರಾ ಮತ್ತು ನಗರ್ ಹವೇಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಆಯಪ್ ಈಗಾಗಲೇ ಪ್ರಾಯೋಗಿಕವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳಿಗೆ ಇದನ್ನು ವಿಸ್ತರಿಸಲಾಗುತ್ತದೆ. ಮಾರ್ಚ್ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಆಯಪ್ ಬಿಡುಗಡೆ ಮಾಡಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ರಸ್ತೆ ಅಗೆಯುವ ಇಲಾಖೆ ಹಾಗೂ ಆಸ್ತಿಯ ಮಾಲೀಕತ್ವ ಹೊಂದಿರುವ ಇಲಾಖೆ (ವಿದ್ಯುತ್, ದೂರಸಂಪರ್ಕ ಇತ್ಯಾದಿ) ನಡುವೆ ಸಮನ್ವಯ ಸಾಧಿಸಲು ಈ ಆಯಪ್ ನೆರವಾಗಲಿದೆ. ಈ ಆಯಪ್ ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ನೆರವಾಗಲು ರಾಜ್ಯ ಸರ್ಕಾರಗಳು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಹಾಗೂ ಸ್ಟೇಟ್ ಅಡ್ಮಿನ್ ಅಕೌಂಟ್ ಮಾಡಿಕೊಳ್ಳಬೇಕು. ಎಲ್ಲ ಇಲಾಖೆಗಳು ತಮ್ಮ ಮೂಲಸೌಕರ್ಯ ಜಾಲಗಳ ಕುರಿತು ಮಾಹಿತಿ ಒದಗಿಸಬೇಕು. ಮುಂದಿನ ದಿನಗಳಲ್ಲಿ ಎಲ್ಲ ಇಲಾಖೆಗಳು ಈ ಆಯಪ್‌ನಲ್ಲಿ ಮಾಹಿತಿ ನೀಡಿ ರಸ್ತೆ ಅಗೆಯಬೇಕು. ಈ ಬಗ್ಗೆ ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಬೇಕು. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.