ಮುಂಬೈ: ಜಾಗತಿಕ ಹಣದುಬ್ಬರ ಭೀತಿಯ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಸತತ ನಾಲ್ಕನೇ ದಿನವೂ ಕುಸಿತ ಕಂಡಿದ್ದು, ಸೆನ್ಸೆಕ್ಸ್ 927 ಅಂಕ ಕುಸಿತಗೊಂಡಿದೆ.
ವಿಶ್ವಾದ್ಯಂತ ಹಣದುಬ್ಬರ ಹರಡುವ ಭೀತಿಯಿಂದ ಭಾರತ ಸೇರಿದಂತೆ ಜಾಗತಿಕ ಷೇರುಪೇಟೆಗಳು ತತ್ತರಿಸಿದ್ದು, ಸತತ ನಾಲ್ಕನೇ ದಿನವೂ ಕುಸಿತ ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ 927.74 ಪಾಯಿಂಟ್‌ಗಳ ಕುಸಿತದೊಂದಿಗೆ 59,744.98 ಕ್ಕೆ ತಲುಪಿದ್ದು, ಇದು ಎಲ್ಲಾ ಪ್ರಮುಖ ಸಂಸ್ಥೆಗಳ ಷೇರುಗಳ ಭಾರೀ ನಷ್ಟಕ್ಕೆ ಕಾರಣವಾಯಿತು. NSE ನಲ್ಲಿ ದೊಡ್ಡ ಕುಸಿತ ಕಂಡುಬಂದಿದ್ದು, ನಿಫ್ಟಿ ಮಾರುಕಟ್ಟೆಯ ಮುಕ್ತಾಯಕ್ಕೆ 272.40 ಅಂಕ ಕಳೆದುಕೊಂಡು 17,554.30 ಅಂಕಗಳಿಗೆ ತಲುಪಿದೆ.
ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಒಳಗೊಂಡಿರುವ 30 ಷೇರುಗಳಲ್ಲಿ ಒಂದು ಮಾತ್ರ ಲಾಭಾಂಶ ಕಾಣುವಲ್ಲಿ ಯಶಸ್ವಿಯಾಗಿದ್ದು, ಐಟಿಸಿ ಷೇರುಗಳು ಇಂದು ಅಲ್ಪ ಏರಿಕೆ ಕಂಡಿವೆ.
ಅಮೆರಿಕದಲ್ಲಿ ಹಣದುಬ್ಬರದ ಹೆಚ್ಚಳದ ದೃಷ್ಟಿಯಿಂದ, ಅಮೆರಿಕ ಫೆಡರಲ್ ರಿಸರ್ವ್ ಮತ್ತೊಮ್ಮೆ ಬಡ್ಡಿದರಗಳಲ್ಲಿ ದೊಡ್ಡ ಹೆಚ್ಚಳ ಮಾಡುವ ಮುನ್ಸೂಚನೆ ನೀಡಿದೆ. ಗೋಲ್ಡ್‌ಮನ್ ಸ್ಯಾಚ್ಸ್ ಪ್ರಕಾರ, ಅಮೆರಿಕ ಸೆಂಟ್ರಲ್ ಬ್ಯಾಂಕ್ ಈ ಬಾರಿಯೂ 75 ಬೇಸಿಸ್ ಪಾಯಿಂಟ್‌ಗಳವರೆಗೆ ಬಡ್ಡಿದರಗಳನ್ನು ಹೆಚ್ಚಿಸಬಹುದು. ಇದರ ಪರಿಣಾಮ ಮಂಗಳವಾರ ಅಮೆರಿಕದ ಮಾರುಕಟ್ಟೆ ಮೇಲೆ ಪರಿಣಾಮ ಕಂಡುಬಂದಿದೆ. ಡೌ ಜೋನ್ಸ್ 697.1 ಪಾಯಿಂಟ್ ಅಥವಾ 2.06 ಶೇಕಡಾ ಕುಸಿದು 33,129.59 ಕ್ಕೆ ತಲುಪಿದ್ದು, ಎಸ್ & ಪಿ 500 ಸೂಚ್ಯಂಕವು 81.75 ಪಾಯಿಂಟ್‌ಗಳು ಅಥವಾ ಶೇಕಡಾ 2 ರಷ್ಟು ಕುಸಿದು 3,997.34 ಕ್ಕೆ ತಲುಪಿದೆ. ಅಂತೆಯೇ ನಾಸ್ಡಾಕ್ 294.97 ಪಾಯಿಂಟ್‌ಗಳು ಅಥವಾ 2.5 ಶೇಕಡಾ ಕಡಿಮೆಯಾಗಿ 11,492.30 ಕ್ಕೆ ಕೊನೆಗೊಂಡಿತು.
ನಿಫ್ಟಿಯ 47 ಷೇರು ಸಂಸ್ಥೆಗಳಿಗೆ ನಷ್ಟ
ವಹಿವಾಟಿನಲ್ಲಿ ನಿಫ್ಟಿಯ 47 ಷೇರು ಸಂಸ್ಥೆಗಳ ಷೇರುಗಳು ನಷ್ಟ
ಅನುಭವಿಸಿವೆ. ಪ್ರಮುಖವಾಗಿ ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ರಿಲಯನ್ಸ್
ಇಂಡಸ್ಟ್ರೀಸ್, ವಿಪ್ರೋ, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ
ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಪ್ರಮುಖ ಸಂಸ್ಥೆಗಳು
ನಷ್ಟವನ್ನು ಅನುಭವಿಸಿವೆ. 30 ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಐಟಿಸಿ ಮಾತ್ರ ಲಾಭ
ಗಳಿಸಿದೆ. ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ದಕ್ಷಿಣ ಕೊರಿಯಾದ ಕಾಸ್ಪಿ, ಜಪಾನ್‌ನ
ನಿಕ್ಕಿ, ಚೀನಾದ ಶಾಂಘೈ ಕಾಂಪೋಸಿಟ್ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್‌ಸೆಂಗ್ ನಷ್ಟ
ಅನುಭವಿಸಿದವು. ಆರಂಭಿಕ ವಹಿವಾಟಿನಲ್ಲಿ ಯುರೋಪ್‌ನ ಪ್ರಮುಖ ಮಾರುಕಟ್ಟೆಗಳು ನಕಾರಾತ್ಮಕ
ಪ್ರವೃತ್ತಿಯಲ್ಲಿವೆ. ಮಂಗಳವಾರ ಅಮೆರಿಕದ ಮಾರುಕಟ್ಟೆ ನಷ್ಟದಲ್ಲಿದೆ ಎಂದು ಆರ್ಥಿಕ
ತಜ್ಞರು ಅಭಿಪ್ರಾಯಪಟ್ಟಿದ್ದಾರೆ.