ಬದಿಯಡ್ಕ: ಪೆರಡಾಲ ಉದನೇಶ್ವರ ಯಕ್ಷಗಾನ ಕಲಾಸಂಘದ 41ನೇ ವಾರ್ಷಿಕೋತ್ಸವ ಮಹಾಶಿವರಾತ್ರಿಯ ಪುಣ್ಯ ದಿನದಂದು ಕ್ಷೇತ್ರದ ವಠಾರದಲ್ಲಿ ಜರಗಿತು. ಕಳೆದ 40 ವರ್ಷಗಳಿಂದ ಕಾಸರಗೋಡಿನ ಗಂಡುಮಟ್ಟಿನ ಕಲೆಯಾದ ಯಕ್ಷಗಾನ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡು ಕಾಸರಗೋಡು ಜಿಲ್ಲೆಯ ಹಿರಿಯ ಕಲಾವಿದರನ್ನು ಗುರುತಿಸಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ. ವಾರ್ಷಿಕೋತ್ಸವದ ಪ್ರಯುಕ್ತ ತ್ರಿ ಜನ್ಮ ಮೋಕ್ಷ ಯಕ್ಷಗಾನ ಬಯಲಾಟ ಜರಗಿತು. ಇದರ ಮೊದಲು ಕೇರಳ ರಾಜ್ಯ ಶಾಲಾ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ನವಜೀವನ ಶಾಲೆಯ ಯಕ್ಷಗಾನ ತಂಡದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಿಷ್ಯ ವೃಂದದ ವತಿಯಿಂದ ಯಕ್ಷ ಗುರು ಜಯರಾಮ ಪಾಟಾಳಿ ಪಡುಮಲೆ ಇವರಿಗೆ ಗುರುವಂದನೆ ಕಾರ್ಯಕ್ರಮವು ಜರಗಿತು. ಇತ್ತೀಚೆಗೆ ನಿಧನರಾದ ಯಕ್ಷಗಾನದ ಭೀಷ್ಮ ಬಲಿಪ ನಾರಾಯಣ ಭಾಗವತರಿಗೆ ಸಭೆಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಸಂತಾಪ ಸೂಚಿಸಲಾಯಿತು.
ಕ್ಷೇತ್ರದ ಆಡಳಿತ ಮಂಡಳಿ ಸದಸ್ಯ ಪಿ.ಜಿ. ಜಗನ್ನಾಥ ರೈ, ಗ್ರಾಮ ಪಂಚಾಯತಿ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಉದನೇಶ್ವರ ಸೇವಾ ಸಮಿತಿ ಪ್ರದಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಪಟ್ಲ ಫೌಂಡೇಶನ್ ಕುಂಬಳೆ ಘಟಕದ ಉಪಾಧ್ಯಕ್ಷ ರಾಘವೇಂದ್ರ ಪ್ರಸಾದ್ ಬದಿಯಡ್ಕ, ಟ್ರಸ್ಟಿ ಜಗದೀಶ ಪೆರಡಾಲ, ಯಕ್ಷಗಾನ ಕಲಾಸಂಘದ ಪದಾಧಿಕಾರಿಗಳಾದ ಚಂದ್ರಹಾಸ. ಪಿ, ಸದಾಶಿವ ಪೆರಡಾಲ, ಯೋಗೀಶ್ ಪೆರಡಾಲ, ವರದ ಕ್ಲಬ್ ನ ಅಧ್ಯಕ್ಷ ಸಂದೀಪ್, ಜ್ಯೋತ್ಸ್ನಾ ಟೀಚರ್ ಅಭಿನಂದನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಉದನೇಶ್ವರ ಭಕ್ತವೃಂದದ ಕಾರ್ಯದರ್ಶಿ ರಾಮ ಮುರಿಯಂಕೂಡ್ಲು ಸ್ವಾಗತಿಸಿ, ನಾರಾಯಣ ಮೂಲಡ್ಕ ವಂದಿಸಿದರು.