ಮಧ್ಯಪ್ರದೇಶ: ಮದುವೆ ಊಟ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ ಇಲ್ಲೊಂದು ಮದುವೆ ಮನೆಯ ಊಟ ಸೇವಿಸಿ 43 ಮಂದಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನ್ಯೂ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಿವಾಹ ಕಾರ್ಯಕ್ರಮ ನಡೆಯಿತು. ಅಲ್ಲಿ ಹಣ್ಣಿನ ಕಸ್ಟರ್ಡ್ಸ್ ಸೇವಿಸಿದ ಬಳಿಕ 43 ಮಂದಿಗೆ ವಿಷಾಹಾರ ಸೇವನೆಯಿಂದಾಗಿ ವಾಂತಿಭೇದಿ ಉಂಟಾಗಿದೆ. ತಕ್ಷಣ ಇವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆಯ ಡಾ.ಬಿ.ಎಂ. ಚೌಹಾಣ್ ತಿಳಿಸಿದ್ದಾರೆ.
ಕಸ್ಟರ್ಡ್ಸ್ ಸೇವಿಸಿದ ಬಳಿಕ ವಾಂತಿಭೇದಿ ಕಾಣಿಸಿಕೊಂಡು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಔಷಧಗಳನ್ನು ನೀಡಿದ ಬಳಿಕ ಚೇತರಿಕೆ ಕಂಡರು. ಪ್ರಾಥಮಿಕ ಚಿಕಿತ್ಸೆ ಬಳಿಕ ಬಹುತೇಕರನ್ನು ಮನೆಗೆ ಕಳುಹಿಸಿ ಕೊಡಲಾಗಿದೆ ಎಂದು ರೋಗಿಯೊಬ್ಬರ ಸಂಬಂಧಿ ತಿಳಿಸಿದ್ದಾರೆ.