ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಭವನೀಯ ಭೂಕಂಪದಂತಹ ಪ್ರಾಕೃತಿಕ ವಿಕೋಪ ನಿಭಾಯಿಸಲು ಯಾವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬುದರ ಕುರಿತು ನಾಲ್ಕು ವಾರಗಳೊಳಗೆ ವರದಿ ಸಲ್ಲಿಸಲು ಎಎಪಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಗುರುವಾರ ಗಡುವು ನೀಡಿತು.
ದೆಹಲಿಯಲ್ಲಿ ಕಟ್ಟಡಗಳು ಭೂಕಂಪ ತಾಳಿಕೊಳ್ಳುವ ಸ್ಥಿರತೆ ಹೊಂದಿಲ್ಲ, ಕಳಪೆಯಾಗಿವೆ. ಪ್ರಬಲ ಭೂಕಂಪ ಸಂಭವಿಸಿದರೆ ಹೆಚ್ಚಿನ ಸಾವುನೋವು ಸಂಭವಿಸುವ ಸಾಧ್ಯತೆ ಇದೆ ಎಂದು ವಕೀಲರಾದ ಅರ್ಪಿತ್ ಭಾರ್ಗವ ಅವರು ಸಲ್ಲಿಸಿರುವ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಹ್ಮಣಿಯಂ ಪ್ರಸಾದ್ ಅವರಿದ್ದ ಪೀಠವು ವಿಚಾರಣೆ ನಡೆಸಿತು.
'ಎಲ್ಲರಿಗೂ ತಮ್ಮ ಜೀವದ ಸುರಕ್ಷತೆಯ ಬಗ್ಗೆ ಚಿಂತೆ ಇರುತ್ತದೆ. ಈ ದಾವೆಗಳಲ್ಲಿ ವ್ಯತಿರಿಕ್ತವಾದುದು ಏನೂ ಇಲ್ಲ. ಪರಿಸ್ಥಿತಿಯ ಅರಿವು ಅಧಿಕಾರಿಗಳಿಗೂ ಇರುತ್ತದೆ. ವಿಪತ್ತು ನಿಭಾಯಿಸಲು ಮಾಡಿಕೊಂಡಿರುವ ಸಿದ್ಧತೆ ಕುರಿತ ತಮ್ಮ ವರದಿಯನ್ನು ಅವರು ಸಲ್ಲಿಸಲಿ' ಎಂದು ಸೂಚಿಸಿದ ಪೀಠವು, ಮುಂದಿನ ವಿಚಾರಣೆಯನ್ನು ಮೇ 10ಕ್ಕೆ ಪಟ್ಟಿ ಮಾಡಿತು.
ಅರ್ಜಿದಾರರ ಪ್ರತಿನಿಧಿ, ಹಿರಿಯ ವಕೀಲ ರವಿ ಸಿಕ್ರಿ, ಟರ್ಕಿ-ಸಿರಿಯಾದಲ್ಲಿ ಫೆ.6ರಂದು ಸಂಭವಿಸಿದ 7.8ರಷ್ಟು ತೀವ್ರತೆಯ ಭೂಕಂಪ ಉಲ್ಲೇಖಿಸಿ, ದೆಹಲಿಯು ಭೂಕಂಪ ವಲಯ 4ರ (ತೀವ್ರತೆಯ ವಲಯ) ಅಡಿಯಲ್ಲಿ ಬರುತ್ತದೆ ಎಂದು ಪೀಠದ ಗಮನಕ್ಕೆ ತಂದರು.