ಮುಂಬೈ: ಮಹಾರಾಷ್ಟ್ರದ ವಿಧಾನಸಭೆಯ ಬಜೆಟ್ ಅಧಿವೇಶನದ ಆರಂಭವಾಗಿದ್ದು, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಶಾಸಕಿ ಸರೋಜ್ ಅಹಿರೆ ಅವರು ತಮ್ಮ ನಾಲ್ಕು ತಿಂಗಳ ಮಗುವಿನ ಜೊತೆಗೆ ಅಧಿವೇಶಕ್ಕೆ ಆಗಮಿಸಿದ್ದಾರೆ.
ಮಗುವಿನ ಜೊತೆ ಆಗಮಿಸಿದ ಅಹಿರೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾಗ್ಪುರದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲೂ ಅಹಿರೆ ಮಗುವೊಂದನ್ನು ತನ್ನೊಂದಿಗೆ ಕೆರದುಕೊಂಡು ಬಂದಿದ್ದರು.
ವಿಧಾನಭವನದಲ್ಲಿ ಹಿರ್ಕಾನಿ ಘಟಕವಿದ್ದು, ಇದನ್ನು ಮಹಿಳೆಯರು ತಮ್ಮ ಶಿಶುಗಳಿಗೆ ಆಹಾರ ನೀಡುವ ಸಲುವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಇಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಹಿರೆ, 'ವಿಧಾನಭವನದ ಹಿರ್ಕಾನಿ ಘಟಕದ ಸ್ವಚ್ಛತೆಯ ಬಗ್ಗೆ ದೂರು ನೀಡಲಾಗಿದೆ. ಅಧಿಕಾರಿಗಳು ಕೊಠಡಿಗಳನ್ನು ಸ್ವಚ್ಛಗೊಳಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ' ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 2022ರಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಜಯಕುಮಾರ್ ಗೋರೆ ಅವರು ವಾಕರ್ ಬಳಸಿ ಬಜೆಟ್ ಅಧಿವೇಶನಕ್ಕೆ ಆಗಮಿಸಿದ್ದಾರೆ. ಹಿಂದೆ, ಹಣಕಾಸು ಸಚಿವರಾಗಿದ್ದ ಜಯಂತ್ ಪಾಟೀಲ್ ಅವರು ಸದನದಲ್ಲಿ ಗಾಲಿಕುರ್ಚಿಯಲ್ಲಿ ಕುಳಿತು ಬಜೆಟ್ ಮಂಡಿಸಿದ್ದರು.