ಲಖನೌ: ಇಲ್ಲಿನ ಸರ್ಕಾರಿ ಬಾಲ ಮಂದಿರದ ನಾಲ್ಕು ಶಿಶುಗಳು ಚಳಿಯಿಂದ ಐದು ದಿನಗಳಲ್ಲಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಬಾಲ ಮಂದಿರದ ಸೂಪರಿಂಟೆಂಡೆಂಟ್ ಅನ್ನು ಅಮಾನತುಗೊಳಿಸಿ, ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ಗುರುವಾರ ಹೇಳಿವೆ.
ಎರಡು ತಿಂಗಳ ಇನ್ನೊಂದು ಶಿಶುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅದರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿವೆ.
ಶಿಶುಗಳು ಚಳಿಯಿಂದ ಸಾವನ್ನಪ್ಪಿವೆ ಎಂಬ ವರದಿಯನ್ನು ಅಲ್ಲಗಳೆದಿರುವ ಉತ್ತರ ಪ್ರದೇಶದ ಮಕ್ಕಳ ಅಭಿವೃದ್ಧಿ ಸಚಿವೆ ಬೇಬಿ ರಾಣಿ ಮೌರ್ಯ, 'ಶಿಶುಗಳು ಥಲಸ್ಸೆಮಿಯಾ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದವು ಮತ್ತು ಆಸ್ಪತ್ರೆಯಲ್ಲಿ ಸಾಧ್ಯವಿರುವ ಎಲ್ಲಾ ಚಿಕಿತ್ಸೆ ನೀಡಲಾಗಿದೆ' ಎಂದಿದ್ದಾರೆ.
ಶಿಶುಗಳು ಸಾವನ್ನಪ್ಪಿರುವುದಕ್ಕೆ ಕಾರಣ ಏನು ಎಂಬುದು ತನಿಖೆಯಿಂದ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಶಿಶುಗಳಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ ಮತ್ತು ಬಾಲಮಂದಿರದಲ್ಲಿ ಸರಿಯಾದ ರೀತಿಯಲ್ಲಿ ನೋಡಿಕೊಂಡಿಲ್ಲ ಎಂಬುದು ಸುಳ್ಳು' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
'ಶಿಶುಗಳನ್ನು ಗಂಭೀರ ಸ್ಥಿತಿಯಲ್ಲಿದ್ದಾಗ ಆಸ್ಪತ್ರೆಗೆ ಕರೆತರಲಾಗಿತ್ತು, ಎರಡು ಶಿಶುಗಳ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟ ಕಾರಣ ಕೆ.ಜಿ. ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿತ್ತು' ಎಂದು ಲಖನೌನ ಸಿವಿಲ್ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.
ಶಿಶುಗಳ ಆರೋಗ್ಯದ ಮೇಲೆ ನಿಗಾ ಇರಿಸಲು ಬಾಲ ಮಂದಿರದಲ್ಲಿ ಮಕ್ಕಳ ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.