ನವದೆಹಲಿ/ಮುಂಬೈ: ಇಂಡಿಗೋ ಹಾಗೂ ಗೋಫಸ್ಟ್ ವಿಮಾನಯಾನ ಸಂಸ್ಥೆಗಳ 50ಕ್ಕೂ ಹೆಚ್ಚು ವಿಮಾನಗಳು ಎಂಜಿನ್ ಸಮಸ್ಯೆಗಳಿಂದ ಕೆಟ್ಟುನಿಂತಿವೆ. ಎಂಜಿನ್ ದುರಸ್ತಿಗೆ ಬೇಕಿರುವ ಬಿಡಿ ಭಾಗಗಳ ಪೂರೈಕೆ ವ್ಯವಸ್ಥೆಗೆ ರಷ್ಯಾ-ಉಕ್ರೇನ್ ಯುದ್ಧವು ಹೊಡೆತ ನೀಡಿದೆ.
'ಪೂರೈಕೆ ವ್ಯವಸ್ಥೆಯಲ್ಲಿ ತೊಡಕಾಗಿರುವುದರಿಂದ ವಿಮಾನಯಾನಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ವಿಮಾನಯಾನ ಸಂಸ್ಥೆಗಳು ಹಲವು ಮಾರ್ಗಗನ್ನು ಚಿಂತಿಸುತ್ತಿವೆ. ವಿಮಾನಗಳನ್ನು ಗುತ್ತಿಗೆಗೆ ಪಡೆಯುವುದು, ಗುತ್ತಿಗೆ ಅವಧಿಯನ್ನು ಹೆಚ್ಚಿಸುವುದರ ಕುರಿತು ಮಾರ್ಗಸೂಚಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಅಧಿಕಾರಿಗಳು ಹೇಳಿದರು.
'ಪ್ರಾಟ್ ಆಯಂಡ್ ವೈಟ್ನಿ ಹಾಗೂ ಸಿಎಫ್‌ಎಂ ಕಂಪನಿಗಳಿಂದ ಇಂಡಿಗೋ ಸಂಸ್ಥೆಯು ಎಂಜಿನ್ ಹಾಗೂ ಬಿಡಿ ಭಾಗಗಳನ್ನು ಪಡೆದುಕೊಳ್ಳುತ್ತಿದೆ. ಗೋಫಸ್ಟ್ ಸಂಸ್ಥೆಯು ಪ್ರಾಟ್ ಆಯಂಡ್ ವೈಟ್ನಿಯೊಂದಿಗೆ ವ್ಯವಹಾರ ನಡೆಸುತ್ತಿದೆ' ಎಂದರು.
'ಸುಮಾರು 50ಕ್ಕೂ ಹೆಚ್ಚು ವಿಮಾನಗಳು ಕೆಟ್ಟುನಿಂತಿವೆ. ಬಿಡಿಭಾಗಗಳ ಪೂರೈಕೆಯ ಖಚಿತತೆ ಕುರಿತು ಪ್ರಾಟ್ ಆಯಂಡ್ ವೈಟ್ನಿ ಕಂಪೆನಿಯು ಭರವಸೆ ನೀಡಿಲ್ಲ' ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಹೇಳಿದರು.