ನವದೆಹಲಿ: ಅದಾನಿ ಸಮೂಹದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಗದ್ದಲ ಮುಂದುವರಿಸಿದ್ದರಿಂದ ಲೋಕಸಭೆ ಕಲಾಪವನ್ನು ಫೆಬ್ರುವರಿ 6, ಸೋಮವಾರದ ವರೆಗೆ ಮುಂದೂಡಲಾಗಿದೆ.
ಷೇರುಗಳ ಮೌಲ್ಯವನ್ನು ಕೃತಕವಾಗಿ ಏರಿಕೆ-ಇಳಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಅದಾನಿ ಸಮೂಹದ ವಿರುದ್ಧ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದವು.
ವಿರೋಧ ಪಕ್ಷದ ನಾಯಕರು ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಲೋಕಸಭೆ ಕಲಾಪವನ್ನು ಮಧ್ಯಾಹ್ನ 2ರವರೆಗೆ ಮುಂದೂಡಲಾಯಿತು. ಆದರೆ ಅದಾನಿ ವಿಚಾರದಲ್ಲಿ ವಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದಿದ್ದರಿಂದ ಸಂಸತ್ ಕಲಾಪ ಮುಂದೂಡಲಾಯಿತು.
ಅದಾನಿ ಸಮೂಹದ ಬಿಕ್ಕಟ್ಟಿನ ವಿಚಾರದಲ್ಲಿ ಗುರುವಾರವೂ ಕಲಾಪಕ್ಕೆ ಅಡ್ಡಿಯಾಗಿತ್ತು.
ಅದಾನಿ ಸಮೂಹದ ಅತ್ಯಂತ ಗಂಭೀರ ಸಮಸ್ಯೆ ಬಗ್ಗೆ ಚರ್ಚಿಸಲು ಎಲ್ಲ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಬಯಸುತ್ತಿವೆ. ಆದರೆ ಮುಜುಗರಕ್ಕೀಡಾಗಿರುವ ಸರ್ಕಾರ ಅದಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ವಾಗ್ದಾಳಿ ಮಾಡಿದ್ದಾರೆ.
ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಸಮೂಹದ ಕುರಿತು ಆರೋಪಗಳನ್ನು ಹೊಂದಿರುವ ವರದಿ ಪ್ರಕಟಿಸಿತ್ತು.