ತುರಾ: ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎಲ್ಲ 60 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಬಲಿಷ್ಠ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೂ ಮುನ್ನ ಎನ್‌ಪಿಪಿಯೊಂದಿಗೆ ಮೈತ್ರಿಯನ್ನು ಕಡಿದುಕೊಂಡಿದ್ದು, ಬಲಿಷ್ಠ ಪಕ್ಷವಾಗಿ ರೂಪುಗೊಳ್ಳಲು ನೆರವಾಗುತ್ತದೆ ಎಂದು ಅವರು ಹೇಳಿದರು.
ತುರಾ ಉತ್ತರ ಕ್ಷೇತ್ರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭಷ್ಟಾಚಾರ ನಿರ್ಮೂಲನೆಗಾಗಿ ಬಿಜೆಪಿಗೆ ಮತ ಹಾಕಿ ಎಂದು ಜನರಿಗೆ ಮನವಿ ಮಾಡಿದರು.
ಕೆಟ್ಟ ಆಡಳಿತ ಹಾಗೂ ಭ್ರಷ್ಟಾಚಾರದಿಂದಾಗಿ ರಾಜ್ಯ 2022-23ರ ಸಾಲಿನಲ್ಲಿ ₹1849 ಕೋಟಿ ಕೊರತೆ ಎದುರಿಸುತ್ತಿದೆ. ಆರ್‌ಬಿಐ ಪ್ರಕಾರ ದೇಶದಲ್ಲೇ ಮೇಘಾಲಯದ ಬೆಳವಣಿಗೆ ಅತ್ಯಂತ ನಿಧಾನಗತಿಯಲ್ಲಿದೆ ಎಂದು ಹೇಳಿದರು.
ಮೇಘಾಲಯದ ಸಮಗ್ರ ಅಭಿವೃದ್ಧಿಗಾಗಿ ₹6,000 ಕೋಟಿಯ ಪಿಎಂ-ಡಿವೈನ್ ಯೋಜನೆ ಪ್ರಾರಂಭಿಸಲಾಗಿದೆ ಎಂದು ಅವರು ಉಲ್ಲೇಖ ಮಾಡಿದರು.
ಈಶಾನ್ಯಕ್ಕೆ 51 ಬಾರಿ ಭೇಟಿ ಕೊಟ್ಟು ಈ ಪ್ರದೇಶದ ಅಭಿವೃದ್ಧಿಗೆ ನೆರವಾದ ಏಕಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ ಎಂದು ಅವರು ತಿಳಿಸಿದರು.
ಮೇಘಾಲಯ ವಿಧಾನಸಭೆಗೆ ಫೆಬ್ರುವರಿ 27ರಂದು ಚುನಾವಣೆ ನಡೆಯಲಿದೆ.