ನವದೆಹಲಿ : 'ಕೇಂದ್ರ ಸರ್ಕಾರವು ಕಾನೂನಿನಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿದ್ದು, ಇನ್ನು ಮುಂದೆ ಮೃತ ದಾನಿಗಳಿಂದ ಅಂಗಾಂಗ ಪಡೆಯುವುದಕ್ಕೆ 65 ವರ್ಷ ಮೇಲ್ಪಟ್ಟ ರೋಗಿಗಳೂ ಹೆಸರು ನೋಂದಾಯಿಸಬಹುದು' ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
'ಪ್ರಸ್ತುತ ಜಾರಿಯಲ್ಲಿರುವ ವಾಸಸ್ಥಳದ ಮಾನದಂಡ ನಿಯಮ ರದ್ದುಪಡಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳಿಗೂ ಸೂಚಿಸಿದೆ. ರೋಗಿಗಳು ಅಂಗಾಂಗ ಪಡೆಯುವುದಕ್ಕಾಗಿ ಇತರ ರಾಜ್ಯಗಳಲ್ಲೂ ಹೆಸರು ನೋಂದಾಯಿಸುವುದಕ್ಕೆ ಇದರಿಂದ ಅನುಕೂಲವಾಗುತ್ತದೆ. ಹೆಸರು ನೋಂದಾವಣೆಗೆ ಶುಲ್ಕ ವಿಧಿಸುವುದು 2014ರ ಟ್ರಾನ್ಸ್ ಫ್ಲಾಂಟೇಷನ್ ಆಫ್ ಹ್ಯೂಮನ್ ಆರ್ಗನ್ಸ್ ಆಯಂಡ್ ಟಿಶ್ಯೂಸ್ ನಿಯಮಕ್ಕೆ ವಿರುದ್ಧವಾದುದು. ಹೀಗಾಗಿ ರಾಜ್ಯಗಳು ರೋಗಿಗಳಿಂದ ಯಾವುದೇ ರೀತಿಯ ಶುಲ್ಕ ಪಡೆಯಬಾರದು ಎಂದೂ ಸಚಿವಾಲಯವು ರಾಜ್ಯಗಳಿಗೆ ತಾಕೀತು ಮಾಡಿದೆ' ಎಂದು ಹೇಳಿವೆ.
ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಕೇರಳ ರಾಜ್ಯಗಳು ಹೆಸರು ನೋಂದಾಯಿಸುವ ರೋಗಿಗಳಿಂದ ₹5 ಸಾವಿರದಿಂದ ₹10 ಸಾವಿರದವರೆಗೆ ಶುಲ್ಕ ವಸೂಲಿ ಮಾಡುತ್ತಿವೆ.
'ಈ ಮೊದಲು ಅಂಗಾಂಗ ಪಡೆಯುವುದಕ್ಕೆ ಗರಿಷ್ಠ 65 ವರ್ಷ ವಯಸ್ಸಿನ ಮಿತಿ ನಿಗದಿಪಡಿಸಲಾಗಿತ್ತು. ನಿಯಮ ಬದಲಾವಣೆಯಿಂದಾಗಿ ಇನ್ನು ಮುಂದೆ ಎಲ್ಲಾ ವಯೋಮಾನದವರೂ ಹೆಸರು ನೋಂದಾಯಿಸಬಹುದು. ಪರಿಷ್ಕೃತ ಮಾರ್ಗಸೂಚಿಯನ್ನು ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಘಟನೆಯ (ಎನ್‌ಒಟಿಟಿಒ) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ' ಎಂದು ಮಾಹಿತಿ ನೀಡಿವೆ.
'ಈ ಮೊದಲು ಕೆಲ ರಾಜ್ಯಗಳು ಸ್ಥಳೀಯ ರೋಗಿಗಳಿಗೆ ಮಾತ್ರ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಿದ್ದವು. ಅಂಗಾಂಗ ಪಡೆಯುವ ವಿಚಾರದಲ್ಲಿ ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತಿತ್ತು. ಇದನ್ನು ತಪ್ಪಿಸುವುದಕ್ಕಾಗಿ ಆರೋಗ್ಯ ಸಚಿವಾಲಯವು ವಾಸಸ್ಥಳದ ಮಾನದಂಡ ನಿಯಮ ರದ್ದುಪಡಿಸುವಂತೆ ರಾಜ್ಯಗಳಿಗೆ ನಿರ್ದೇಶಿಸಿದೆ' ಎಂದೂ ಹೇಳಿವೆ.