ಇಸ್ಲಮಾಬಾದ್ : ಐಎಂಎಫ್‌ನಿಂದ ಆರ್ಥಿಕ ನೆರವು ವಿಳಂಬವಾಗುವ ಸಾಧ್ಯತೆಯ ನಡುವೆಯೇ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಪಾಕಿಸ್ತಾನಕ್ಕೆ ಚೀನಾ 700 ದಶಲಕ್ಷ ಡಾಲರ್ ಸಾಲ ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ.
700 ದಶಲಕ್ಷ ಡಾಲರ್‌ನಷ್ಟು ಆರ್ಥಿಕ ನೆರವನ್ನು ಈದಿನ ಚೀನಾ ಅಭಿವೃದ್ಧಿ ಬ್ಯಾಂಕ್‌ನಿಂದ ಸ್ಟೇಟ್‌ಬ್ಯಾಂಕ್ ಆಫ್ ಪಾಕಿಸ್ತಾನಕ್ಕೆ ವರ್ಗಾವಣೆಯಾಗಿದೆ ಎಂದು ಪಾಕಿಸ್ತಾನದ ವಿತ್ತಸಚಿವ ಇಷಾಕ್ ದಾರ್ ಟ್ವೀಟ್ ಮಾಡಿದ್ದಾರೆ.
ಅಗತ್ಯದ ಸಂದರ್ಭ ತುರ್ತು ನೆರವು ಒದಗಿಸಿರುವ ನಮ್ಮ ವಿಶೇಷ ಮಿತ್ರ ಚೀನಾಕ್ಕೆ ಕೃತಜ್ಞತೆಗಳು ಎಂದು ಪಾಕ್ ಪ್ರಧಾನಿ ಶಹಬಾರ್ ಶರೀಫ್ ಅಭಿನಂದನೆ ಸಲ್ಲಿಸಿದ್ದಾರೆ.
ಪಾಕಿಸ್ತಾನದ ಮಿತ್ರರಾಷ್ಟ್ರವು ಐಎಂಎಫ್‌ನ ಒಪ್ಪಂದ ಅಂತಿಮಗೊಳ್ಳುವವರೆಗೆ ಕಾಯದೆ ತಮ್ಮ ಪಾಲನ್ನು ವರ್ಗಾಯಿಸಿದ್ದಾರೆ. ಈ ವಿಷಯವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಾಕಿಸ್ತಾನ ಡಿಫಾಲ್ಟರ್ ಪಟ್ಟಿಗೆ ಸೇರುವುದನ್ನು ತಪ್ಪಿಸಲು ಮತ್ತು ದೈನಂದಿನ ಅಗತ್ಯದ ವಸ್ತುಗಳ ಆಮದಿಗೆ ಈ ಹಣವು ಸಂಜೀವಿನಿಯಂತೆ ಒದಗಿಬಂದಿದೆ ಎಂದು ಶರೀಫ್ ಭದ್ರತಾ ಅಧಿಕಾರಿಗಳ ಸಭೆಯಲ್ಲಿ ಹೇಳಿದರು.
ಚೀನಾದ ನೆರವಿನೊಂದಿಗೆ 2.9 ಶತಕೋಟಿ ಡಾಲರ್‌ಗೆ ಕುಸಿದಿದ್ದ ಪಾಕಿಸ್ತಾನದ ವಿದೇಶಿ ವಿನಿಮಯ ದಾಸ್ತಾನು 4 ಶತಕೋಟಿ ಡಾಲರ್‌ಗೆ ತಲುಪಿದೆ. ಐಎಂಎಫ್‌ನಿಂದ 1.1 ಶತಕೋಟಿ ಡಾಲರ್ ಸಾಲವನ್ನು ಪಾಕ್ ಎದುರು ನೋಡುತ್ತಿದೆ.