ಅಹಮದಾಬಾದ್: 15ರಿಂದ 60 ವರ್ಷ ವಯೋಮಾನದ ಮಹಿಳೆಯರು ದಿನದಲ್ಲಿ 7.2 ಗಂಟೆ ಕಾಲ ವೇತನರಹಿತ ಗೃಹಕೃತ್ಯದಲ್ಲಿ ತೊಡಗಿರುತ್ತಾರೆ. ಇದೇ ವೇಳೆ ಪುರುಷರು 2.8 ಗಂಟೆ ಕಾಲ ವೇತನರಹಿತ ಗೃಹಕೃತ್ಯದಲ್ಲಿ ತೊಡಗಿರುತ್ತಾರೆ ಎಂದು ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್- ಅಹಮದಾಬಾದ್ (ಐಐಎಂಎ) ಪ್ರಾಧ್ಯಾಪಕರೊಬ್ಬರು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.
ಪ್ರಾಧ್ಯಾಪಕಿ ನಮ್ರತಾ ಚಿಂದಾರ್ಕರ್ ಈ ಸಂಶೋಧನೆಯನ್ನು ನಡೆಸಿದ್ದಾರೆ. ವೇತನ ಪಡೆಯುವ ಉದ್ಯೋಗದಲ್ಲಿರುವ ಮಹಿಳೆ ಕೂಡಾ ಉದ್ಯೋಗದಲ್ಲಿರುವ ಪುರಷನಿಗಿಂತ ಎರಡು ಪಟ್ಟು ಹೆಚ್ಚು ಸಮಯವನ್ನು ಗೃಹಕೃತ್ಯಗಳಾದ ಮನೆ ಸ್ವಚ್ಛಗೊಳಿಸುವಿಕೆ, ಅಡುಗೆ ತಯಾರಿ, ಲಾಲನೆ ಪಾಲನೆಯಂಥ ಕೆಲಸದಲ್ಲಿ ತೊಡಗಿರುತ್ತಾರೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎಸ್‌ಎಸ್‌ಎಸ್‌ಒ) ಸಮಯ ಆಧಾರಿತ ಸಮೀಕ್ಷೆಯಿಂದ (ಟಿಯುಎಸ್) ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಗೃಹಕೃತ್ಯಗಳಲ್ಲಿ ಮಹಿಳೆಯರು ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಎಂಬುದು ಈಗಾಗಲೇ ತಿಳಿದಿರುವ ವಿಚಾರವಾದರೂ, 'ಸಮಯ ಆಧರಿತ ದತ್ತಾಂಶ: ಲಿಂಗಾಧಾರಿತ ನೀತಿ ವಿಶ್ಲೇಷಣೆಗೆ ಸಾಧನ' ಎಂಬ ಸಂಶೋಧನೆಯಲ್ಲಿ ಭಾರತೀಯ ಮಹಿಳೆಯು ನಿರ್ದಿಷ್ಟವಾಗಿ ಎಷ್ಟು ಸಮಯವನ್ನು ಗೃಹಕೃತ್ಯಗಳಿಗೆ ಮೀಸಲಿಟ್ಟಿದ್ದಾಳೆ ಎಂಬುದನ್ನು ಮೊದಲ ಬಾರಿಗೆ ಮಾಪನ ಮಾಡಲಾಗಿದೆ. ಇದಕ್ಕಾಗಿ ಬೆಳಿಗ್ಗೆ 4 ಗಂಟೆಯಿಂದ ಮರುದಿನ ಬೆಳಿಗ್ಗೆ 4 ಗಂಟೆವರೆಗಿನ 24 ಗಂಟೆಗಳಲ್ಲಿ ಮಹಿಳೆಯರು ಮತ್ತು ಪುರುಷರ ದೈನಂದಿನ ಚಟುವಟಿಕೆಗಳ ಅವಧಿಯ ದತ್ತಾಂಶವನ್ನು ಸಂಗ್ರಹಿಸಲಾಗಿತ್ತು ಎಂದು ನಮ್ರತ ತಿಳಿಸಿದ್ದಾರೆ.
ವಾರದಲ್ಲಿ 50 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದರೆ ಅದನ್ನು 'ಸಮಯದ ಅಭಾವ' ಎಂದು ಕರೆಯಲಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಶೇ24ರಷ್ಟು ಕಡಿಮೆ ಬಿಡುವಿನ ಅವಧಿಯನ್ನು ಹೊಂದಿರುತ್ತಾರೆ. ಅಡುಗೆ ಮಾಡಲು ಅಡುಗೆ ಅನಿಲ ಅಥವಾ ಇನ್ಯಾವುದಾದರೂ ಆಧುನಿಕ ಸೌಲಭ್ಯ ಹೊಂದಿರುವ ಮಹಿಳೆಯರು ಈ ಸೌಲಭ್ಯಗಳನನ್ನು ಹೊಂದಿರದ ಮಹಿಳೆಯರಿಗಿಂತ 41ರಿಂದ 80 ನಿಮಿಷ ಹೆಚ್ಚು ಬಿಡುವು ಪಡೆಯುತ್ತಾರೆ ಎಂದು ಸಹ ಈ ಅಧ್ಯಯನದಲ್ಲಿ ತಿಳಿಸಲಾಗಿದೆ.