ಅಂಕಾರ : ಸೋಮವಾರ ಬೆಳಿಗ್ಗೆ ಆಗ್ನೇಯ ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ನಗರಗಳಲ್ಲಿ ಕಟ್ಟಡಗಳು ಕುಸಿದಿವೆ. ನೆರೆಯ ಸಿರಿಯಾದಲ್ಲೂ ತೀವ್ರ ಹಾನಿಯುಂಟಾಗಿದೆ. ಸೈಪ್ರಸ್ ಮತ್ತು ಈಜಿಪ್ಟ್‌ಗಳಲ್ಲೂ ಭೂಮಿ ಕಂಪಿಸಿದೆ.
ಭೂಕಂಪದಿಂದ ತೀವ್ರವಾಗಿ ಹಾನಿಯಾಗಿರುವ ಟರ್ಕಿ ಮತ್ತು ಸಿರಿಯಾಗಳಲ್ಲಿ ಈ ವರೆಗೆ ಸುಮಾರು 200 ಮಂದಿ ಮೃತಪಟ್ಟಿದ್ದಾರೆ.
ಟರ್ಕಿಯಲ್ಲಿ ದುರಂತದಿಂದಾಗಿ 76 ಮಂದಿ ಮೃತಪಟ್ಟಿದ್ದರು, 440 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.
ಸಿರಿಯಾದಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಪ್ರದೇಶ ಮತ್ತು ಬಂಡುಕೋರ ಬಣದ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ 119 ಮಂದಿ ಸಾವಿಗೀಡಾಗಿದ್ದಾರೆ.
ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯ ಸಿರಿಯಾದಲ್ಲಿ ಪರಿಸ್ಥಿತಿ ವಿನಾಶಕಾರಿಯಾಗಿದೆ ಎಂದು ವರದಿಗಳಾಗಿವೆ. ಹಲವಾರು ಕಟ್ಟಡಗಳು ನೆಲಸಮಗೊಂಡಿದ್ದು, ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಕಟ್ಟಡಗಳನ್ನು ತೊರೆದು, ತೆರೆದ ಖಾಲಿ ಪ್ರದೇಶದಲ್ಲಿ ಸೇರುವಂತೆ ನಾಗರಿಕರಿಗೆ ರಕ್ಷಣಾ ತಂಡಗಳು ಸೂಚಿವೆ.
ಟರ್ಕಿಯ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಗಾಜಿಯಾಂಟೆಪ್‌ನಿಂದ 33 ಕಿಲೋಮೀಟರ್ (20 ಮೈಲಿ) ದೂರದಲ್ಲಿ ಭೂಕಂಪನ ಕೇಂದ್ರವನ್ನು ಅಮೆರಿಕದ ಭೂವಿಜ್ಞಾನ ಸಂಸ್ಥೆ ಗುರುತಿಸಿದೆ.