ಅಮೇರಿಕಾದ ಮನರಂಜನಾ ಮಾಧ್ಯಮ ವಾಲ್ಟ್ ಡಿಸ್ನಿಯ ಚಂದಾದಾರರು ಕುಸಿತ ಕಂಡಿರುವ ಪರಿಣಾಮ ಸಂಸ್ಥೆ 7,000 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.
ಸಿಇಒ ಬಾಬ್ ಐಗರ್ ಸಂಸ್ಥೆಯ ಪುನಾರಚನೆಯನ್ನು ಘೋಷಿಸಿದ್ದು, ಅಮೇರಿಕಾದ ಟೆಕ್ ದೈತ್ಯ ಸಂಸ್ಥೆಗಳ ಹಾದಿಯನ್ನೇ ಮನರಂಜನಾ ಮಾಧ್ಯಮ ವಾಲ್ಟ್ ಡಿಸ್ನಿ ಸಹ ಅನುಸರಿಸಿದೆ.
ಬಹಳ ಲಘುವಾಗಿ ಈ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಬಾಬ್ ಐಗರ್ ಉದ್ಯೋಗ ಕಡಿತವನ್ನು ಸಮರ್ಥಿಸಿಕೊಂಡಿದ್ದಾರೆ.
2021 ರ ವಾರ್ಷಿಕ ವರದಿಯಲ್ಲಿ ಡಿಸ್ನಿ ಸಮೂಹ ಜಾಗತಿಕ ಮಟ್ಟದಲ್ಲಿ 190,000 ಮಂದಿಗೆ ನೌಕರಿ ನೀಡಿತ್ತು ಈ ಪೈಕಿ ಶೇ.80 ರಷ್ಟು ಮಂದಿ ಪೂರ್ಣಾವಧಿ ನೌಕರರಾಗಿದ್ದರು ಎಂದು ತಿಳಿಸಿದೆ.
ಟಿವಿ. ಹಾಗೂ ಸಿನಿಮಾಗಳಲ್ಲಿ ನಾವು ಏನೇ ಮಾಡುವುದಿದ್ದರೂ ಅದೆಲ್ಲದಕ್ಕೂ ವೆಚ್ಚಕ್ಕೆ ಸಂಬಂಧಿಸಿದಂತೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದೇವೆ, ಏಕೆಂದರೆ, ಇಂದಿನ ಸ್ಪರ್ಧಾತ್ಮಕ ಜಗತ್ತು ಇನ್ನೂ ಹೆಚ್ಚು ದುಬಾರಿಯಾಗಿದೆ ಎಂದು ಐಗರ್ ತಿಳಿಸಿದ್ದಾರೆ.
ಗ್ರಾಹಕರು ಹೆಚ್ಚಿನ ಖರ್ಚುಗಳಿಗೆ ಕತ್ತರಿ ಹಾಕುತ್ತಿದ್ದಾರೆ ಪರಿಣಾಮ ಸಂಸ್ಥೆಯ ಸ್ಟ್ರೀಮಿಂಗ್ ಸೇವೆಗಳು ಇದೇ ಮೊದಲ ಬಾರಿಗೆ ಕಳೆದ ತ್ರೈಮಾಸಿಕದಲ್ಲಿ ಚಂದಾದಾರರ ಕುಸಿತವನ್ನು ಕಂಡಿದೆ ಎಂದು ವಾಲ್ಟ್ ಡಿಸ್ನಿ ಹೇಳಿದೆ.
3 ತಿಂಗಳ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿಕೊಂಡಲ್ಲಿ, ನೆಟ್ಫ್ಲಿಕ್ಸ್ ನ ಎದುರಾಳಿ ಸಂಸ್ಥೆ ಡಿಸ್ನಿ+ ಚಂದಾದಾರರ ಸಂಖ್ಯೆ ಡಿಸೆಂಬರ್ 31 ರಂದು ಶೇ.1 ರಷ್ಟು ಅಂದರೆ 161.8 ಮಿಲಿಯನ್ ಗೆ ಕುಸಿದಿದೆ. ಈ ಕುಸಿತವನ್ನು ವಿಶ್ಲೇಷಕರು ಈ ಹಿಂದೆಯೇ ಅಂದಾಜಿಸಿದ್ದರು ಹಾಗೂ ಪೋಸ್ಟ್ ಸೇಷನ್ ಟ್ರೇಡಿಂಗ್ ನಲ್ಲಿ ಷೇರುಗಳ ಬೆಲೆ ಶೇ.5ಕ್ಕಿಂತಲೂ ಹೆಚ್ಚು ಏರಿಕೆ ಕಂಡಿದೆ.
ಹೂಡಿಕೆದಾರರಿಗೆ ಸಂದೇಶ ನೀಡಿರುವ ಇನ್ಸೈಡರ್ ಇಂಟೆಲಿಜೆನ್ಸ್ ಪ್ರಧಾನ ವಿಶ್ಲೇಷಕ ಪಾಲ್ ವೆರ್ನಾ, ಡಿಸ್ನಿಗೆ ಮುಂದೆ ಇನ್ನೂ ದೊಡ್ಡ ಸವಾಲುಗಳಿವೆ ಎಂದು ಹೇಳಿದ್ದಾರೆ.
"ಅದರ ಸಾಂಪ್ರದಾಯಿಕ ಟಿವಿ ವ್ಯಾಪಾರವು ಸವೆಯುತ್ತಿದೆ, ಅದರ ಸ್ಟ್ರೀಮಿಂಗ್ ಕಾರ್ಯಾಚರಣೆ ಇನ್ನೂ ಲಾಭದಾಯಕವಾಗಿಲ್ಲ, ಮತ್ತು ಇದು ವೆಚ್ಚವನ್ನು ನಿಯಂತ್ರಿಸಲು ಮತ್ತು ಐಗರ್ ನಂತರದ ಉತ್ತರಾಧಿಕಾರಕ್ಕಾಗಿ ಯೋಜಿಸಲು ಹೂಡಿಕೆದಾರರಿಂದ ಒತ್ತಡವನ್ನು ಎದುರಿಸುತ್ತಿದೆ" ಎಂದು ಪಾಲ್ ವೆರ್ನಾ ಹೇಳಿದ್ದಾರೆ.
ಡಿಸ್ನಿ ತನ್ನ ಕಂಟೆಂಟ್ ಪ್ರಮಾಣವನ್ನು ಮರುಪರಿಶೀಲಿಸಲಿದೆ ಹಾಗೂ ಸ್ಟ್ರೀಮಿಂಗ್ ಸೇವೆಗಳ ಬೆಲೆಯನ್ನೂ ಮರುಪರಿಶೀಲಿಸಲಿದೆ ಎಂದು ಈ ನಡುವೆ ಐಗರ್ ವಿಶ್ಲೇಷಕರಿಗೆ ತಿಳಿಸಿದ್ದಾರೆ.