ನಾಗ್ಪುರ: ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದ ಹಿಂಸಾಚಾರ, ಈಶಾನ್ಯದಲ್ಲಿ ಬಂಡಾಯ ಮತ್ತು ಎಡಪಂಥೀಯ ಉಗ್ರವಾದ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಶೇಕಡಾ 80 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಮತ್ ಮೀಡಿಯಾ ಗ್ರೂಪ್ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್ ದರ್ದಾ ಅವರ ಜನ್ಮ ಶತಮಾನೋತ್ಸವ ಮತ್ತು ನಗರದಿಂದ ಪ್ರಕಟವಾಗುವ ಮರಾಠಿ ಪತ್ರಿಕೆ ಆವೃತ್ತಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಅಮೃತ್ ಕಾಲ್' ದ ಮೂರು ದೊಡ್ಡ ಉದ್ದೇಶಗಳನ್ನು ವಿವರಿಸಿದ ಶಾ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಇಂದಿನ ಪೀಳಿಗೆಯ ಮುಂದೆ ಪ್ರದರ್ಶಿಸುವುದು ಮೊದಲ ಗುರಿಯಾಗಿದೆ ಎಂದು ಹೇಳಿದರು.
ಕಳೆದ 75 ವರ್ಷಗಳಲ್ಲಿ ದೇಶ ಸಾಧಿಸಿದ ಪ್ರಗತಿಯನ್ನು ಜನರ ಮುಂದೆ ತರುವುದು ಎರಡನೇ ಉದ್ದೇಶವಾಗಿದ್ದರೆ, ಮುಂದಿನ 25 ವರ್ಷಗಳಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಅಗ್ರಸ್ಥಾನ ತಲುಪುವಂತೆ ನೋಡಿಕೊಳ್ಳುವುದು ಮೂರನೇ ಗುರಿಯಾಗಿದೆ ಎಂದರು.
'ಮೋದಿ ಸರ್ಕಾರಕ್ಕೂ ಮೊದಲು ದೇಶವು ಕಾಶ್ಮೀರ, ಈಶಾನ್ಯ ಮತ್ತು ಎಡಪಂಥೀಯ ಉಗ್ರವಾದದ ವಿಷಯದಲ್ಲಿ ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸಿತ್ತು. ಇಂದು ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದ ಹಿಂಸಾಚಾರ, ಈಶಾನ್ಯದಲ್ಲಿ ಬಂಡಾಯ ಮತ್ತು ಎಡಪಂಥೀಯ ಉಗ್ರವಾದ ಶೇಕಡಾ 80 ರಷ್ಟು ಕಡಿಮೆಯಾಗಿದೆ ಎಂದು ಹೇಳಬಲ್ಲೆ' ಎಂದು ಅವರು ಹೇಳಿದರು.
ಕಣಿವೆ ರಾಜ್ಯಕ್ಕೆ ವರ್ಷದಲ್ಲಿ 1.8 ಕೋಟಿ ಪ್ರವಾಸಿಗರು ಭೇಟಿ ನೀಡಿರುವುದು ದೊಡ್ಡ ವಿಷಯ. ಕಾಶ್ಮೀರದಲ್ಲಿ 70 ವರ್ಷಗಳಲ್ಲಿ ₹ 12,000 ಕೋಟಿ ಹೂಡಿಕೆ ಆಗಿತ್ತು. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ ಕೇವಲ ಮೂರು ವರ್ಷಗಳಲ್ಲಿ₹ 12,000 ಕೋಟಿಗಳ ಹೂಡಿಕೆ ಆಗಿದೆ. ಕಾಶ್ಮೀರದ ಪ್ರತಿ ಮನೆಗೆ ನಲ್ಲಿ ನೀರು ಮತ್ತು ವಿದ್ಯುತ್ ಒದಗಿಸಲಾಗಿದೆ. ಇದು ದೊಡ್ಡ ಬದಲಾವಣೆ' ಎಂದು ತಿಳಿಸಿದರು.