ಕೊಚ್ಚಿ: ಮನೆಯ ಅಕ್ವೇರಿಯಂನಲ್ಲಿ ಮೀನು ಸತ್ತು ಹೋಯಿತೆಂಬ ದುಃಖದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 13 ವರ್ಷದ ರೋಶನ್ ಮೆನನ್ ಆತ್ಮಹತ್ಯೆ ಮಾಡಿಕೊಂಡ ಹುಡುಗ. ಈ ಘಟನೆ ಮಲಪ್ಪುರಂ ಜಿಲ್ಲೆಯ ಪೊನ್ನಾನಿಯ ಚಂಗರಂಕುಲಂ ಎಂಬಲ್ಲಿ ನಡೆದಿದೆ.ರೋಶನ್ ಮೂಕುತಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದ.
ಆತ್ಮಹತ್ಯೆ ಮಾಡಿಕೊಂಡಿರುವ ರೋಶನ್ ಮೆನನ್ ಮನೆಯ ಅಕ್ವೇರಿಯಂನಲ್ಲಿದ್ದ ಮೀನಿನೊಂದಿಗೆ ಆತ್ಮೀಯವಾಗಿ ಹಚ್ಚಿಕೊಂಡಿದ್ದ. ಆತ ಸಂತೋಷದಿಂದಲೇ ಅಕ್ವೇರಿಯಂ ನಿರ್ವಹಣೆ ಕೆಲಸವನ್ನೂ ಮಾಡುತ್ತಿದ್ದ. ಆದರೆ ಅಕ್ವೇರಿಯಂ ಮೀನುಗಳು ಮೃತಪಟ್ಟಿದ್ದರಿಂದ ರೋಶನ್ ತೀವ್ರ ದುಃಖಿತನಾಗಿದ್ದ. ಇದರಿಂದ ರೋಶನ್ ಖಿನ್ನತೆಗೂ ಒಳಗಾಗಿದ್ದ.
ರೋಶನ್ ಮನೆನ್ ಪ್ರಾಣಿ-ಪಕ್ಷಿಗಳನ್ನು ಇಷ್ಟ ಪಡುತ್ತಿದ್ದ. ಹೀಗಾಗಿ ಎಂದಿನಂತೆ ಬೆಳಗ್ಗೆ ಪಾರಿವಾಳಗಳಿಗೆ ಆಹಾರ ನೀಡಲು ಮನೆಯಿಂದ ಹೊರ ಹೋಗಿದ್ದಾನೆ. ಇದನ್ನು ಗಮನಿಸಿದ್ದ ಪಾಲಕರು, ಎಷ್ಟು ಹೊತ್ತಾದರೂ ಮರಳಿ ಮನೆಗೆ ಬಾರದಿದ್ದರಿಂದ ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ವರದಿಯ ಪ್ರಕಾರ ಬೆಳಗ್ಗೆ 8.30ರ ಸುಮಾರಿಗೆ ಮನೆಯಿಂದ ಹೊರ ಹೋದ ರೋಶನ್ ಮನೆಗೆ ಹಿಂತಿರುಗಿಲ್ಲ. ಮಗ ಎಲ್ಲಿಯೂ ಕಾಣದ ಕಾರಣ ಹುಡುಕಾಟ ಪ್ರಾರಂಭಿಸಿದ್ದಾರೆ.
ಪಾಲಕರು ಹುಡುಕಾಡುತ್ತಾ ಹೋದಾಗ, ರೋಷನ್ ಮನೆಯ ಟೆರೇಸ್‌ನಲ್ಲಿ ನಿರ್ಮಿಸಲಾಗಿದ್ದ ಪ್ಲಾಸ್ಟಿಕ್ ಶೆಡ್‌ನೊಳಗೆ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಕೂಡಲೇ ಅವನನ್ನ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅಷ್ಟರಲ್ಲಿ ಆತ ಮೃತಪಟ್ಟಿದ್ದ.