ನವದೆಹಲಿ: ಮೆಹಂದಿ ಹಚ್ಚಿಕೊಂಡ ಕೆಲವೇ ಕ್ಷಣಗಳಲ್ಲಿ 9 ವರ್ಷದ ಬಾಲಕಿಯೊಬ್ಬಳು ಮೂರ್ಛೆ ಹೋದ ಪ್ರಕರಣವೊಂದು ನಡೆದಿದೆ. ಇದೊಂದು ವಿಚಿತ್ರ ಪ್ರಕರಣವೆಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ಕ್ಲಿನಿಕಲ್ ನ್ಯೂರೋಫಿಸಿಯಾಲಜಿ 2023ರ ಜನವರಿ ಆವೃತ್ತಿಯಲ್ಲಿ ಈ ವಿಚಿತ್ರ ಪ್ರಕರಣವನ್ನು ಉಲ್ಲೇಖಿಸಲಾಗಿದೆ.
ಒಂಬತ್ತು ವರ್ಷದ ಬಾಲಕಿಯೊಬ್ಬಳು ಮೆಹಂದಿ ಹಚ್ಚಿಕೊಂಡ ಬೆನ್ನಿಗೇ ಎಪಿಲೆಪ್ಟಿಕ್ ಸೀಜರ್ಗೆ ತುತ್ತಾಗಿದ್ದನ್ನು ಇಲ್ಲಿನ ವೈದ್ಯರು ಹೇಳಿಕೊಂಡಿದ್ದಾರೆ.
ಈ ಬಾಲಕಿ ಮೆಹಂದಿಯ ಪರಿಮಳದಿಂದ ಮೂರ್ಛೆಗೆ ಒಳಗಾಗಿ ಬಳಲುವುದು ನಡೆಯುತ್ತಿದೆ. ಮೆಹಂದಿ ಹಚ್ಚಿಕೊಂಡಾಗ ಈಕೆ ಮೊದಲ ಸಲ ಮೂರ್ಛೆ ಹೋಗಿ ಬಿದ್ದಿದ್ದು, 20 ಸೆಕೆಂಡುಗಳವರೆಗೆ ಸೆಳೆತವಿತ್ತು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.
ಇತ್ತೀಚೆಗೆ ಆಕೆಯನ್ನು ಪುನಃ ಆಸ್ಪತ್ರೆಗೆ ಪರೀಕ್ಷೆಗೆ ಕರೆತರಲಾಗಿತ್ತು. ಆಸ್ಪತ್ರೆಯ ವ್ಯವಸ್ಥೆಯಡಿ ಆಕೆಯ ಕೈಗೆ ಮೆಹಂದಿ ಹಚ್ಚಿ ಕೈಯನ್ನು ಎದೆಯ ಬಳಿ ತರುತ್ತಿರುವಂತೆ ಆಕೆ ಮೂರ್ಛೆಗೆ ಒಳಗಾಗುವುದು ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಾತ್ರವಲ್ಲ, ಇದೊಂದು ವಿಚಿತ್ರ ಪ್ರಕರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ಆಕೆಗೆ ಚಿಕಿತ್ಸೆ ನೀಡಲಾಗಿದ್ದು, ಅವಳು ಸ್ಥಿರವಾಗಿದ್ದಾಳೆ ಮತ್ತು ಆಕೆಗೆ ಮೆಹಂದಿಯಿಂದ ದೂರ ಇರುವಂತೆ ಸಲಹೆ ನೀಡಲಾಗಿದೆ ಎಂದಿದ್ದಾರೆ.