ಕೋಝಿಕ್ಕೋಡ್: ಏಳನೇ ತರಗತಿಯಲ್ಲಿ ಕಲಿಯುತ್ತಿರುವ ವೇಳೆ ನಿಷೇಧಿತ ಮಾದಕ ವಸ್ತು MDMA ಸೇವಿಸಿ ಡ್ರಗ್ ಮಾಫಿಯಾಕ್ಕೆ ಬಲಿಯಾಗಿ ಅದರ ಸಾಗಾಟದ ಕೆಲಸಗಳನ್ನು ಮಾಡುತ್ತಿದ್ದ ಕೇರಳದ ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ಡ್ರಗ್ ಮಾಫಿಯಾದ ಕರಾಳ ಮುಖವನ್ನು ಬಹಿರಂಗಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಮಾದಕ ದ್ರವ್ಯ ಹ್ಯಾಶಿಶ್ ಆಯಿಲ್ ಮಾರಾಟ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು.
ಬಂಧಿತ ಯುವಕನ ಸ್ನೇಹಿತನಾಗಿರುವ ಇನ್ನೊಬ್ಬ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈತನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಇಬ್ಬರು ವ್ಯಕ್ತಿಗಳ ಬಗ್ಗೆ ಬಾಲಕಿ ಪೊಲೀಸರಿಗೆ ವಿವರ ನೀಡಿದ್ದಳು.
ಬಾಲಕಿಯ ಹೇಳಿಕೆ ಆಧರಿಸಿ ಹತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋಝಿಕ್ಕೋಡ್ ಸಿಟಿ ನಾರ್ಕೋಟಿಕ್ಸ್ ಸೆಲ್ ಸಹಾಯಕ ಕಮಿಷನರ್ ಪ್ರಕಾಶನ್ ಪಡನ್ನಯಿಲ್ ತನಿಖೆಯ ನೇತೃತ್ವ ವಹಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಗ್ರೂಪ್ ಮೂಲಕ ಡ್ರಗ್ ಮಾಫಿಯಾಕ್ಕೆ ಸಿಕ್ಕಿಬಿದ್ದಿರುವುದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಯ ಗೆಳೆಯನೊಬ್ಬ ಆಕೆಯನ್ನು ಆ ಗುಂಪಿಗೆ ಸೇರಿಸಿದ್ದ. 7ನೇ ತರಗತಿ ಮುಗಿದಾಗಿನಿಂದ ಗ್ಯಾಂಗ್‌ಗೆ ಕ್ಯಾರಿಯರ್ ಆಗಿದ್ದ ಆಕೆ ಶಾಲೆಯ ಸಮಯದ ನಂತರ ಈ ಕೆಲಸ ಮಾಡುತ್ತಿದ್ದಳು. ಸದ್ಯ ಈ ಪ್ರಕರಣ ಕೇರಳದಲ್ಲಿ ಮಾತ್ರವಲ್ಲದೇ ದೇಶದ ಎಲ್ಲ ಹೆತ್ತವರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.