ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರವನ್ನು ಸ್ಫೋಟಿಸುವ ಬೆದರಿಕೆಯೊಡ್ಡಿದ್ದ ಆರೋಪ ಮೇಲೆ ಮೂವರು ಪಿಎಫ್ಐ ಶಂಕಿತರನ್ನು ಎನ್ಐಎ ಬಂಧಿಸಿದೆ.
ರಾಮಮಂದಿರವನ್ನು ಸ್ಫೋಟಿಸುವ ಅಂತಹ ಬೆದರಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನ ಮೂವರು ಶಂಕಿತ ಸದಸ್ಯರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಇಂದು ಬೆಳಗ್ಗೆ ಬಂಧಿಸಿದೆ.
ಬಿಹಾರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮೋತಿಹಾರಿ ಜಿಲ್ಲೆಯ ಚಕಿಯಾ ಉಪವಿಭಾಗದ ಕುವಾನ್ವಾನ್ ಗ್ರಾಮದಿಂದ ಮೂವರನ್ನು ಎನ್‌ಐಎ ವಶಕ್ಕೆ ತೆಗೆದುಕೊಂಡಿದೆ. ಎನ್‌ಐಎ ಮತ್ತು ಇತರ ಕೇಂದ್ರೀಯ ಸಂಸ್ಥೆಗಳು ಶಂಕಿತರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿವೆ.
ಮೂಲಗಳ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ನಂತರ ಎನ್‌ಐಎ ಕಾರ್ಯಾಚರಣೆಗೆ ಇಳಿದಿತ್ತು. ಉಸ್ಮಾನ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಲೈವ್‌ನಲ್ಲಿ ರಾಮ ಮಂದಿರವನ್ನು ಕೆಡವಿ ಅದೇ ಸ್ಥಳದಲ್ಲಿ ಬಾಬರಿ ಮಸೀದಿ ನಿರ್ಮಿಸುವುದಾಗಿ ಬೆದರಿಕೆ ಹಾಕಿದ್ದಾನು. ಜನವರಿ 31ರಂದು ನೇಪಾಳದಿಂದ ಅಯೋಧ್ಯೆಗೆ ದೇವಶಿಲಾ ಯಾತ್ರೆ ಸಾಗುತ್ತಿದ್ದಾಗ ಉಸ್ಮಾನ್ ಎಂಬ ಯುವಕ ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಬಂದಿದ್ದು ಆಗ ಈ ಯಾತ್ರೆ ಬಿಹಾರದ ಮೂಲಕ ಸಾಗುತ್ತಿತ್ತು.
ಈ ವೈರಲ್ ವೀಡಿಯೊಗೆ ಸಂಬಂಧಿಸಿದಂತೆ, ಎನ್‌ಐಎ ಶನಿವಾರ ಬೆಳಿಗ್ಗೆ ಮೋತಿಹಾರಿಯಲ್ಲಿ ಕ್ರಮ ಕೈಗೊಂಡು 3 ಪಿಎಫ್‌ಐ ಶಂಕಿತರನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. ಎನ್‌ಐಎ ಮೂವರು ಶಂಕಿತರನ್ನು ವಿಚಾರಣೆ ನಡೆಸುತ್ತಿದೆ. ಕಳೆದ ಜುಲೈನಲ್ಲಿ ಭೇದಿಸಲ್ಪಟ್ಟ ಪಾಟ್ನಾ ಪಿಎಫ್‌ಐ ಮಾಡ್ಯೂಲ್‌ನೊಂದಿಗೆ ಅವರ ಸಂಪರ್ಕವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ.
ಈ ಹಿಂದೆ ನಾಲ್ವರು ಪಿಎಫ್‌ಐ ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಕೆ
ಇದಕ್ಕೂ ಮೊದಲು ಎನ್‌ಐಎ ಬಿಹಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಕರಣದಲ್ಲಿ
ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, 'ಭಯೋತ್ಪಾದನೆ ಮತ್ತು
ಹಿಂಸಾಚಾರದ ಕೃತ್ಯಗಳನ್ನು ಎಸಗುವ ಉದ್ದೇಶದಿಂದ ಕ್ರಿಮಿನಲ್ ಸಂಚು ರೂಪಿಸಲಾಗಿದೆ' ಎಂದು
ಹೇಳಿದೆ. ಬಿಹಾರದ ರಾಜಧಾನಿ ಪಾಟ್ನಾದ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಭಯೋತ್ಪಾದನಾ
ನಿಗ್ರಹ ಸಂಸ್ಥೆ ಆರೋಪಪಟ್ಟಿ ಸಲ್ಲಿಸಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ
(ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳೆಲ್ಲರೂ
ಬಿಹಾರದ ವಿವಿಧ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ.