ನವದೆಹಲಿ: ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯ ವರದಿಯ ನಂತರ ಅದಾನಿ ಸಮೂಹದ ಷೇರುಗಳಲ್ಲಿ ಆಗಿರುವ ಕುಸಿತವು ನಿರ್ದಿಷ್ಟವಾಗಿ ಕಂಪನಿಯ ಸಮಸ್ಯೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಹೇಳಿದ್ದಾರೆ.
ಷೇರುಪೇಟೆಯನ್ನು ಸ್ಥಿರವಾಗಿ ಇರುವಂತೆ ಮಾಡಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮತ್ತು ಆರ್‌ಬಿಐ ಸದಾ ಸಿದ್ಧವಾಗಿರಬೇಕು ಎಂದು ನಿರ್ಮಲಾ ಹೇಳಿದ್ದಾರೆ.
'ಮಾರುಕಟ್ಟೆಯಲ್ಲಿ ಆಗಾಗ್ಗೆ ಅನಿರೀಕ್ಷಿತ ಚಲನೆ ಕಂಡುಬರುತ್ತದೆ. ಅದು ಸಣ್ಣ ಅಥವಾ ದೊಡ್ಡ ಮಟ್ಟದಲ್ಲಿ ಇರಬಹುದು. ಆದರೆ, ಇಂತಹ ಪರಿಸ್ಥಿತಿಗಳನ್ನು ನಿರ್ವಹಿಸಲಾಗುತ್ತದೆ. ನಮ್ಮ ನಿಯಂತ್ರಣ ಸಂಸ್ಥೆಗಳು ಈ ವಿಷಯವನ್ನು ಪರಿಶೀಲಿಸುತ್ತಿರುವುದಾಗಿ ನಂಬಿದ್ದೇನೆ' ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಚಿವೆ ನಿರ್ಮಲಾ ತಿಳಿಸಿದ್ದಾರೆ.
ಬ್ಯಾಂಕ್‌ಗಳು ಮತ್ತು ವಿಮಾ ಕಂಪನಿಗಳು ಯಾವುದೇ ಒಂದು ಕಂಪನಿಯಲ್ಲಿ ಅತಿಯಾಗಿ ಹೂಡಿಕೆ ಮಾಡಿಲ್ಲ. ಅದಾನಿ ಸಮೂಹಕ್ಕೆ ನೀಡಿರುವ ಸಾಲ ಮತ್ತು ಬಂಡವಾಳದ
ಕುರಿತು ಬ್ಯಾಂಕ್‌ಗಳು ಮತ್ತು ವಿಮಾ ಕಂಪನಿಗಳೇ ಸಾರ್ವಜನಿಕವಾಗಿ ಮಾಹಿತಿ ಬಹಿರಂಗಪಡಿಸುತ್ತಿವೆ ಎಂದು ಅವರು ಹೇಳಿದ್ದಾರೆ.