ನವದೆಹಲಿ: 'ಕೋವಿಡ್ ಲಸಿಕೆ ಪಡೆದ ಕೆಲವರು ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಬಳಲಿರುವುದನ್ನು ಗಮನಿಸಿರುವ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಸಂಶೋಧಕರು, ಈ ಸಮಸ್ಯೆಯ ಸಾಧ್ಯತೆ ಕಡಿಮೆ ಮಾಡುವ ಸಲುವಾಗಿ ಹೊಸ ಕೋವಿಡ್ ಲಸಿಕೆಯೊಂದನ್ನು ಅಭಿವೃದ್ಧಿಪಡಿಸುತ್ತಿದ್ದಾರೆ' ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
'ನೆಕ್ಸ್ಟ್ ಜನರೇಷನ್' ಹೆಸರಿನ ಲಸಿಕೆಯು ಸದ್ಯ ಪ್ರಾಣಿಗಳ ಮೇಲೆ ಪ್ರಯೋಗ ನಡೆಸುವ ಹಂತದಲ್ಲಿದೆ. ಸದ್ಯ ಚಾಲ್ತಿಯಲ್ಲಿರುವ ಲಸಿಕೆಯು ಬಳಸಿದ ವಸ್ತುಗಳ ಸ್ಥಿರತೆ, ಕಡಿಮೆ ರೋಗ ನಿರೋಧಕ ಶಕ್ತಿ, ರಕ್ತ ಹೆಪ್ಪುಗಟ್ಟುವಿಕೆಯಂತಹ ನ್ಯೂನ್ಯತೆಗಳನ್ನು ಒಳಗೊಂಡಿದೆ. ಇವುಗಳನ್ನು ನಿವಾರಿಸಬಲ್ಲ ಮತ್ತು ದೀರ್ಘ ಕಾಲದವರೆಗೆ ದೇಹದೊಳಗೆ ಪ್ರತಿಕಾಯ ಸಕ್ರಿಯವಾಗಿರುವಂತಹ ಲಸಿಕೆಯನ್ನು ಈಗ ಅಭಿವೃದ್ಧಿಪಡಿಸಲಾಗುತ್ತಿದೆ' ಎಂದು ದೆಹಲಿ ಐಐಟಿಯ ಬಯೋಮೆಡಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಜಯಂತ ಭಟ್ಟಾಚಾರ್ಯ ಹೇಳಿದ್ದಾರೆ.
'ಸದ್ಯ ಬಳಕೆಯಲ್ಲಿರುವ ಲಸಿಕೆಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗಾಗಿ ಸಿಂಥೆಟಿಕ್ ವಸ್ತುಗಳು ಅಥವಾ ಅಡೆನೊವೈರಾಣುಗಳನ್ನು (ಜೀವಕೋಶಗಳಲ್ಲಿನ ದೋಷಗಳನ್ನು ಸರಿಪಡಿಸುವ ವೈರಾಣುಗಳು) ಬಳಸಲಾಗುತ್ತಿದೆ. ಆದರೆ ನೈಸರ್ಗಿಕವಾಗಿ ನ್ಯಾನೊ-ಲಸಿಕೆ ಅಭಿವೃದ್ಧಿಪಡಿಸಲು ಮುಂದಾಗಿರುವ ಐಐಟಿಯ ಸಂಶೋಧಕರು ಇದಕ್ಕಾಗಿ ಮಾನವ ದೇಹದಲ್ಲಿನ ಪ್ರತಿಕಾಯ ಕೋಶಗಳನ್ನೇ ಉಪಯೋಗಿಸುತ್ತಿದ್ದಾರೆ' ಎಂದು ಅವರು ಮಾಹಿತಿ ನೀಡಿದ್ದಾರೆ.
'ಸದ್ಯ ಸಂಶೋಧಕರು ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ಪ್ರಸ್ತುತ ಬಳಕೆಯಲ್ಲಿರುವ ಲಸಿಕೆಗಳಿಗಿಂತಲೂ ಹೆಚ್ಚು ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ, ಲಸಿಕೆ ನೀಡಿದ ಬಳಿಕ ಅದರಲ್ಲಿನ ಪ್ರತಿಕಾಯಗಳು (ಎಪಿಸಿಗಳು) ಮಾನವ ದೇಹದ ಪ್ರತಿಕಾಯಗಳೊಂದಿಗೆ ಸಂಸ್ಕರಣೆಗೊಳಪಡುತ್ತವೆ. ಇವು ಅಂತಿಮವಾಗಿ ಪ್ರತಿಕಾಯಗಳನ್ನು ಉತ್ಪಾದಿಸಲು ಮತ್ತು ವೈರಾಣುವನ್ನು ತೊಡೆದುಹಾಕಲು ಇತರ ಪ್ರತಿಕಾಯ ಕೋಶಗಳನ್ನು (ಬಿ ಮತ್ತು ಟಿ ಜೀವಕೋಶಗಳು) ಸಕ್ರಿಯಗೊಳಿಸುತ್ತವೆ' ಎಂದು ವಿವರಿಸಿದ್ದಾರೆ.
'ಆದರೆ, ಈಗ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ಒಂದು ಹೆಜ್ಜೆ ಮುಂದಿದ್ದು, ಸಕ್ರಿಯ ಎಪಿಸಿಗಳಿಂದ ಉತ್ಪನ್ನವಾಗುವ ನ್ಯಾನೊವೆಸಿಕಲ್‌ಗಳನ್ನು ಬಳಸುತ್ತದೆ. ಇದು ಈಗಾಗಲೇ ಸಂಸ್ಕರಿಸಿದ ಆಯಂಟಿಜೆನ್‌ಗಳನ್ನೂ ಹೊಂದಿರುತ್ತದೆ. ಅಲ್ಲದೇ ಈ ಲಸಿಕೆಯು ಬಿ ಮತ್ತು ಟಿ ಯಂತಹ ಪ್ರತಿರಕ್ಷಣಾ ಜೀವಕೋಶಗಳು ನೇರವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತಹ ಅಂಶಗಳಿಂದ ಕೂಡಿರಲಿದೆ' ಎಂದೂ ಅವರು ಹೇಳಿದ್ದಾರೆ.