ಬೆಂಗಳೂರು: ಅಪರೂಪದ ಅಂತರಿಕ್ಷ ದ ಘಟನೆಯಲ್ಲಿ, ಚಂದ್ರ, ಶುಕ್ರ ಮತ್ತು ಗುರು ಪ್ರಪಂಚದಾದ್ಯಂತ ಆಕಾಶದಲ್ಲಿ ಜತೆಗೆ ಕಾಣಿಸಿಕೊಳ್ಳುತ್ತಿಚೆ. ಮೂರು ಆಕಾಶಕಾಯಗಳು ಪರಸ್ಪರ ಹತ್ತಿರ ಬಂದಂತೆ ರಾತ್ರಿಯ ಆಕಾಶದಲ್ಲಿ ಕಾಣಿಸಿಕೊಳ್ಳುತ್ತಿವೆ.
ಶುಕ್ರ ಗ್ರಹ ಹಾಗೂ ಸೌರವ್ಯೂಹದ ಅತಿದೊಡ್ಡ ಗ್ರಹವಾದ ಗುರು, ಮಾರ್ಚ್ 1 ರಂದು ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳಲಿವೆ. ಈಗಾಗಲೇ ಅವು ಪರಸ್ಪರ ಹತ್ತಿರವಾಗಿ ಕಾಣಿಸಿಕೊಳ್ಳುತ್ತಿವೆ. ನಿನ್ನೆ ಸಂಜೆ (ಬುಧವಾರ) ಚಂದ್ರನೂ ಗುರು-ಶುಕ್ರರೊಂದಿಗೆ ಸೇರಿಕೊಂಡಿದ್ದಾನೆ.
ಈ ಗ್ರಹಗಳು ಒಂದರಿಂದ ಇನ್ನೊಂದು ಲಕ್ಷಾಂತರ ಕಿಮೀ ದೂರದಲ್ಲಿದ್ದರೂ ಭೂಮಿಯಿಂದ ನೋಡುವಾಗ ಮಾತ್ರ ಜತೆ ಜತೆಗೆ ಇರುವಂತೆ ಕಾಣಿಸುತ್ತದೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಜನರು ಆಕಾಶದಲ್ಲಿ ಜತೆ ಜತೆಯಾಗಿ ಕಾಣಿಸಿಕೊಳ್ಳುತ್ತಿರುವ ಪ್ರಕಾಶಮಾನವಾದ ಗ್ರಹಗಳನ್ನು ಗುರುತಿಸಿದ್ದಾರೆ. ಶುಕ್ರ ಗ್ರಹ ಪ್ರಸ್ತುತ, ಸೂರ್ಯ ಮತ್ತು ಚಂದ್ರನ ನಂತರ ಆಕಾಶದಲ್ಲಿ 3 ನೇ ಪ್ರಕಾಶಮಾನವಾದ ನೈಸರ್ಗಿಕ ದೇಹವಾಗಿದೆ. ಇದು ಎಷ್ಟು ಬೆರಗುಗೊಳಿಸುವಷ್ಟು ಪ್ರಕಾಶಮಾನವಾಗಿದೆ ಎಂದರೆ ಕೆಲವೊಮ್ಮೆ ಹಗಲು ಹೊತ್ತಿನಲ್ಲಿಯೂ ಸಹ ಶುಕ್ರನನ್ನು ಗುರುತಿಸಬಹುದು.
ಕಳೆದ ಕೆಲವು ದಿನಗಳಿಂದ ಸೂರ್ಯಾಸ್ತದ ನಂತರ ಸಾಧಾರಣ 7ಗಂಟೆಗೆ ಪಶ್ಚಿಮ ಆಗಸದಲ್ಲಿ ಚಂದ್ರ ಗುರು ಮತ್ತು ಶುಕ್ರರು ಸರಳ ರೇಖೆಯಲ್ಲಿ ಕಾಣುತ್ತಿದ್ದು, ಆಸಕ್ತರು ವಿಹಂಗಮ ನೋಟ ಕಣ್ತುಂಬಿಕೊಳ್ಳಬಹುದು. ಈ ದೃಶ್ಯ ಕೆಲವೇ ಹೊತ್ತು ಕಾಣಿಸಿಕೊಳ್ಳಲಿದ್ದು ನಂತರ ಭೂಮಿಯ ತಿರುಗುವಿಕೆಯ ಕಾರಣ ಮರೆಯಾಗುತ್ತದೆ.